
ಬೆಂಗಳೂರು: ವೇಗವಾಗಿ ಬಂದ ವಾಹನವೊಂದು ಐದು ತಿಂಗಳ ನಾಯಿಯೊಂದಕ್ಕೆ ಡಿಕ್ಕಿ ಹೊಡೆದು, ಸ್ಥಳದಿಂದ ಪರಾರಿಯಾಗಿದ್ದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಹಕಾರ ನಗರದ ಅಂಚೆ ಕಚೇರಿಯ ಹೊರಭಾಗದಲ್ಲಿ ಜನವರಿ 4 ರಂದು ಈ ಘಟನೆ ನಡೆದಿತ್ತು.
ಈ ಸಂಬಂಧ ಸಹಕಾರ ನಗರದ ನಿವಾಸಿಗಳ ಗುಂಪೊಂದು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿತ್ತು. 12.35 ರ ಸುಮಾರಿನಲ್ಲಿ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿಯಾಗಿ ವೇಗವಾಗಿ ಬಂದ ವಾಹನವೊಂದು ಐದು ತಿಂಗಳ ನಾಯಿಮರಿಗೆ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗಳಾಗಿವೆ.
ಚಾಲಕ ಗಾಯಗೊಂಡ ನಾಯಿಯನ್ನು ಪರೀಕ್ಷಿಸಲು ಅಥವಾ ನೆರವು ನೀಡದೆ ವಾಹನ ನಿಲ್ಲಿಸದೆ ಮುಂದೆ ಹೋಗಿದ್ದಾನೆ. ಗಾಯಗೊಂಡ ನಾಯಿಮರಿ ನೋವಿನಿಂದ ಅಳುತ್ತಾ, ಹತ್ತಿರದ ಚರಂಡಿಗೆ ಬಿದ್ದಿತ್ತು. ಮರುದಿನ ಅದರ ಮೃತದೇಹ ಪತ್ತೆಯಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿತ್ತು.
ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದೇ ರೀತಿ ಜನವರಿ 10 ರಂದು ಮಲಗಿದ್ದ ಬೀದಿ ನಾಯಿಯ ಮೇಲೆ ವಾಹನ ಚಲಾಯಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. 35 ವರ್ಷದ ಆರೋಪಿಯೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದರು. ಬಳಿಕ ಜಾಮೀನಿನ ಮೇಲೆ ಆರೋಪಿ ಬಿಡುಗಡೆಯಾಗಿದ್ದರು.
Advertisement