ಬೀದರ್‌ನಲ್ಲಿ ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು ಇಬ್ಬರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡು ಹಾರಿಸಿ ಹಣದ ಸಮೇತ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ 11.30ರ ಸುಮಾರಿಗೆ ಜನನಿಬಿಡ ಶಿವಾಜಿ ಚೌಕ್‌ನಲ್ಲಿರುವ ಎಸ್ಬಿಐ ಬ್ಯಾಂಕ್ ಎಟಿಎಂಗೆ ಹಣವನ್ನು ತುಂಬಿಸಲು ಭದ್ರತಾ ಸಿಬ್ಬಂದಿ CMS ಏಜೆನ್ಸಿಯ ವಾಹನದಲ್ಲಿ 93 ಲಕ್ಷ ರೂಪಾಯಿ ತೆಗೆದುಕೊಂಡು ಬಂದಿದ್ದರು. ಇನ್ನೇನು ಎಟಿಎಂಗೆ ಹಣ ಹಾಕಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸಿಬ್ಬಂದಿಗಳಾದ ಗಿರಿ ವೆಂಕಟೇಶ್ ಮತ್ತು ಶಿವ ಕಾಶಿನಾಥ್ ಮೃತಪಟ್ಟಿದ್ದಾರೆ. ಖದೀಮರು ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರು ಫೋನ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಪೊಲೀಸರು ಅಲರ್ಟ್ ಆಗಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಬ್ರಾಂಡ್ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 413 ಕೋಟಿ ರೂ.ಗಳ ಯೋಜನೆಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್, ಈ ಯೋಜನೆಯಡಿ, ಶಿಥಿಲಗೊಂಡ ಕಟ್ಟಡಗಳನ್ನು ಹೊಸ ಕಟ್ಟಡಗಳಾಗಿ ಬದಲಾಯಿಸಲಾಗುತ್ತದೆ ಎಂದರು. 13 ಬಿಬಿಎಂಪಿ ಆಸ್ಪತ್ರೆಗಳನ್ನು 30 ಹಾಸಿಗೆಗಳಿಗೆ, ಐದು ಆಸ್ಪತ್ರೆಗಳನ್ನು 50 ಹಾಸಿಗೆಗಳ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. 22 ದಂತ ಆಸ್ಪತ್ರೆಗಳು ಮತ್ತು ಏಳು ಫಿಸಿಯೋಥೆರಪಿ ಆಸ್ಪತ್ರೆಗಳನ್ನು ಸಹ ಸ್ಥಾಪಿಸಲಾಗುತ್ತದೆ ಎಂದರು.
ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. 217ನೇ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಇಂದಿನ ಸಮಾರಂಭದಲ್ಲಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಪ್ರಸನ್ನಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರನ್ನು ಸಿಎಂ ಸನ್ಮಾನಿಸಿದರು. ಸಂಸ್ಕೃತದಲ್ಲಿ ವಾಲ್ಮೀಕಿ ಎಂದರೆ ಬೃಹತ್ ಗಾತ್ರದ ಹುತ್ತ ಎಂಬುದಾಗಿದೆ. ಹೀಗಾಗಿ ವಿವಿಧ ಜಾತಿಯ ಸುಮಾರು 1.5 ಲಕ್ಷ ಹೂವುಗಳಿಂದ ಬೃಹತ್ ಹುತ್ತವನ್ನು ನಿರ್ಮಿಸಲಾಗಿದೆ. ಇನ್ನು ವಾಲ್ಮೀಕಿ ಆಶ್ರಮ ಮತ್ತು ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ Benz ಕಾರು ನೆಲಮಂಗಲದಲ್ಲಿ ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಮೂವರು ಓಂ ಶಕ್ತಿ ಮಾಲಾಧಾರಿಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಮಾಲಾಧಾರಿಗೆ ಗಂಭೀರ ಗಾಯಗಳಾಗಿವೆ. ಶಾಸಕ ಪಪ್ಪಿ ಅಪಾಯದಿಂದ ಪಾರಾಗಿದ್ದು ಗಾಯಾಳುಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆ ಚಾಲನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಅಪಘಾತಕ್ಕೀಡಾದ ಬೆಂಜ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಖಾಸಗಿ ಫೋಟೊಗಳು ಮತ್ತು ವಿಡಿಯೋಗಳನ್ನು ಸೋರಿಕೆ ಮಾಡುವುದಾಗಿ ಸ್ವಂತ ಚಿಕ್ಕಪ್ಪನೇ ಬ್ಲ್ಯಾಕ್‌ಮೇಲ್ ಮಾಡಿದ್ದರಿಂದ ಮನನೊಂದ 24 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈಟ್‌ಫೀಲ್ಡ್‌ನ ಇಪಿಐಪಿ ಕೈಗಾರಿಕಾ ಪ್ರದೇಶದಲ್ಲಿರುವ ರಾಧಾ ಹೋಟೆಲ್‌ನ ರೂಂನಲ್ಲಿ ಮಹಿಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತ್ರಸ್ತೆಯ ಸ್ನೇಹಿತ ಲೈಂಗಿಕ ಕಿರುಕುಳದ ಬಗ್ಗೆ ಆಕೆಯ ತಾಯಿಗೆ ತಿಳಿಸಿದ ನಂತರವೇ ನಿಖರವಾದ ಕಾರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಸಂತ್ರಸ್ತೆಯ ತಾಯಿ ಎಚ್‌ಎಎಲ್ ಪೊಲೀಸರಿಗೆ ದೂರು ನೀಡಿದ್ದು ಆರೋಪಿ ಮತ್ತು ಆತನ ಪತ್ನಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ. ಆರೋಪಿಯು ಸಂತ್ರಸ್ತೆಯ ಖಾಸಗಿ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಇಟ್ಟುಕೊಂಡು ಲೈಂಗಿಕ ಲಾಭಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದ್ದು ಸಂತ್ರಸ್ತೆಯ ಚಿಕ್ಕಪ್ಪನನ್ನು ಬಂಧಿಸಲಾಗಿದೆ.
Advertisement