
ಬಳ್ಳಾರಿ: ಅಪರಾಧ ಸ್ಥಳಕ್ಕೆ ಕರೆದೊಯ್ಯುವಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅತ್ಯಾಚಾರ ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪೊಲೀಸರ ಪ್ರಕಾರ, ಸ್ಥಳ ಮಹಜರು ನಡೆಸಲು ಅಪರಾಧ ಸ್ಥಳಕ್ಕೆ ಕರೆತಂದಾಗ ಆರೋಪಿಯು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.
ಆರೋಪಿಯನ್ನು ವಿಜಯನಗರ ಜಿಲ್ಲೆಯ ಕಮಲಾಪುರ ನಿವಾಸಿ 26 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಸೋಮವಾರ ಅತ್ಯಾಚಾರದ ಘಟನೆ ನಡೆದಿದೆ. ದೂರು ಪಡೆದ ಪೊಲೀಸರು ಮೂರು ತಂಡಗಳನ್ನು ರಚಿಸಿ ಕೊಪ್ಪಳ ಜಿಲ್ಲೆಯ ಹುಲಗಿಯಲ್ಲಿ ಮಂಜುನಾಥನನ್ನು ಬಂಧಿಸಿದ್ದರು.
ತನಿಖೆಯ ಆರೋಪಿಯನ್ನು ಅಪರಾಧ ಸ್ಥಳಕ್ಕೆ ಕರೆತಂದಾಗ, ಆತ ಪೊಲೀಸ್ ಪೇದೆ ರಘುಪತಿ ಎಂಬುವವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದಾಕೇಶ್ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನವರಿ 13ರಂದು ಮದ್ಯದ ಅಮಲಿನಲ್ಲಿ ಆರೋಪಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದನು. ಬಾಲಕಿಯು ಮನೆ ಮುಂದೆ ಆಟವಾಡುತ್ತಿದ್ದಾಗ ಆರೋಪಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗುವಿಗೆ ಆಂತರಿಕ ಗಾಯಗಳು ಮತ್ತು ತೀವ್ರ ರಕ್ತಸ್ರಾವವಾಗಿತ್ತು. ಬಾಲಕಿಯನ್ನು ಪತ್ತೆ ಹಚ್ಚಿದ ಜನರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ.
ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ದಾಖಲಿಸಿದ್ದರು.
ಬೆಂಗಳೂರಿನಲ್ಲಿ ಸೋಮವಾರ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಸಂತ್ರಸ್ತೆಯ ತಂದೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ಅವರ ತಾಯಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಉರುವಲು ಸಂಗ್ರಹಿಸಲು ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ ಸಂತ್ರಸ್ತೆಯನ್ನು ಒಂಟಿಯಾಗಿ ಕಂಡು ಕುಡಿದ ಅಮಲಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಬಿಹಾರ ಮೂಲದ 25 ವರ್ಷದ ಅಭಿಷೇಕ್ ಕುಮಾರ್ ಎಂದು ಗುರುತಿಸಲಾಗಿದೆ.
Advertisement