
ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಿಸುವ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿದ್ದು, ನಾವು ಶೀಘ್ರದಲ್ಲೇ ಲಾಸ್ ಏಂಜಲೀಸ್‌ನಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಯನ್ನು ಆರಂಭಿಸುತ್ತೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶುಕ್ರವಾರ ಭರವಸೆ ನೀಡಿದರು.
ಇಂದು ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಜೈಶಂಕರ್ ಅವರು, ಬೆಂಗಳೂರಿನಲ್ಲಿ ನೂತನ ಅಮೆರಿಕ ದೂತಾವಾಸ ಕಚೇರಿ ಆರಂಭಗೊಂಡಿರುವುದು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಹೊಸ ನಾಂದಿ ಹಾಡಲಿದೆ ಎಂದರು.
ಇದು ಅನೇಕರಿಗೆ ಪ್ರಯಾಣ ಮತ್ತು ವೀಸಾ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ. ಈ ಬಹುನಿರೀಕ್ಷಿತ ಬೆಳವಣಿಗೆಯು ಬೆಂಗಳೂರಿನ ರೋಮಾಂಚಕ ಟೆಕ್ ಸಮುದಾಯದೊಂದಿಗೆ ಸಹಯೋಗವನ್ನು ಹೆಚ್ಚಿಸಲು ಭರವಸೆ ನೀಡುತ್ತದೆ ಎಂದರು.
"ಬಹಳ ದಿನಗಳಿಂದ ಅಮೆರಿಕ ರಾಯಭಾರ ಕಚೇರಿಗಾಗಿ ಬೆಂಗಳೂರಿಗರು ಕಾಯುತ್ತಿದ್ದರು. ಸೆಪ್ಟೆಂಬರ್ 2023 ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಆರಂಭಿಸುವ ವಿಷಯ ಪ್ರಸ್ತಾಪಿಸಿದ್ದರು. ಅಂತಿಮವಾಗಿ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಆದ್ದರಿಂದ ನಾವು ಅವರ ತವರಾದ ಲಾಸ್ ಏಂಜಲೀಸ್‌ನಲ್ಲಿ ನಮ್ಮ ಕಾನ್ಸುಲೇಟ್ ಕಚೇರಿಯನ್ನು ತೆರೆಯುತ್ತೇವೆ ಎಂದು ಜೈಶಂಕರ್ ಹೇಳಿದರು.
ನಂತರ ಮಾತನಾಡಿದ ಎರಿಕ್ ಗಾರ್ಸೆಟ್ಟಿ ಅವರು, ಬೆಂಗಳೂರಿನ ಅಮೆರಿಕ ರಾಯಭಾರ ಕಚೇರಿಯು ಮೊದಲಿಗೆ ವೀಸಾ ಸೇವೆಗಳನ್ನು ನೀಡುವುದಿಲ್ಲ. ನಂತರ ದಿನಗಳಲ್ಲಿ ವೀಸಾ ಸೇವೆ ಆರಂಬಿಸಲಾಗುವುದು ಎಂದು ಹೇಳಿದರು.
Advertisement