Road Rage: ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ Bengaluru Police
ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ರೋಡ್ ರೇಜ್ ಪ್ರಕರಣದಲ್ಲಿ ಕಾರಿನ ಮೇಲೆ ದಾಳಿ ಮಾಡಿ ಅದರ ಗ್ಲಾಸ್ ಗೆ ಒದ್ದಿದ್ದ ಇಬ್ಬರು ದುಷ್ಕರ್ಮಿಗಳನ್ನು ಕೊನೆಗೂ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹೌದು.. ಡಿಸೆಂಬರ್ 28ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದ್ದ ರಸ್ತೆ ಕಾಳಗ ಪ್ರಕರಣದಲ್ಲಿ ದ್ವಿಚಕ್ರ ವಾಹನ ಸವಾರರು ಕಾರನ್ನು ಬೆನ್ನಟ್ಟಿದ್ದು ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರು ನಿಂತಿರುವುದನ್ನು ನೋಡಿ ಕೋಪದಿಂದ ಕಾರಿನ ಬಾನೆಟ್ ಮೇಲೆ ಹತ್ತಿ ವಿಂಡ್ ಶೀಲ್ಡ್ ಅನ್ನು ಒದ್ದಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ದುಷ್ಕರ್ಮಿಗಳ ದಾಳಿಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ವಿವೇಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,, ಸೋನಿ ಸಿಗ್ನಲ್ ಕಡೆಯಿಂದ ಶ್ರೀನಿವಾಗಿಲು ಜಂಕ್ಷನ್ ಕಡೆಗೆ ಹೋಗುತ್ತಿದ್ದ ಸೆಲೆರಿಯೋ ಕಾರಿನ ಮೇಲೆ ದ್ವಿಚಕ್ರನವಾಹನದಲ್ಲಿ ಬಂದ ಇಬ್ಬರು ಯುವಕರು ನೋಡ ನೋಡುತ್ತಲೇ ದಾಳಿಗೆ ಮುಂದಾಗಿದ್ದರು.
ಈ ಪೈಕಿ ಒಬ್ಬಾತ ಏಕಾಏಕಿ ಕಾರಿನ ಬಾನೆಟ್ ಮೇಲೆ ಏರಿ ಮುಂಭಾಗದ ಗ್ಲಾಸ್ ಅನ್ನು ಒದಿದ್ದ. ಈ ಸಂಬಂಧ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಕಲಾವತಿ ಎಂಬುವವರು ದೂರು ದಾಖಲಿಸಿದ್ದರು.
ಇದೀಗ ದೂರಿನ ಆಧಾರದ ಮೇಲೆ ಬೆಂಗಳೂರಿನ ವಿವೇಕನಗರ ಪೊಲೀಸರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ವಾಹನ ಸಮೇತ ಇಬ್ಬರನ್ನೂ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಅಲ್ಲದೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಅಲ್ಲದೆ ಬೆಂಗಳೂರು ಪೊಲೀಸರು ಈ ಕುರಿತ ವಿಡಿಯೋವನ್ನೂ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.