Air balloon ಕಂಡು ಗ್ರಾಮಸ್ಥರಲ್ಲಿ ಆತಂಕ: ಹೈದರಾಬಾದ್ ನಲ್ಲಿ ಹಾರಿಸಿದ ಬಲೂನ್ ಹುಮ್ನಾಬಾದ್ ನಲ್ಲಿ ಧರೆಗೆ! Video
ಬೀದರ್: ವಿಚಿತ್ರ ಯಂತ್ರೋಪಕರಣಗಳನ್ನು ಹೊತ್ತಿದ್ದ ಏರ್ ಬಲೂನ್ ವೊಂದು ಪತನವಾಗುವ ಮೂಲಕ ಸ್ಥಳೀಯ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದ ಘಟನೆ ಕರ್ನಾಟಕದ ಬೀದರ್ ನಲ್ಲಿ ನಡೆದಿದೆ.
ಹೌದು.. ತಾಂತ್ರಿಕ ಉಪಕರಣವನ್ನು ಒಳಗೊಂಡ ಈ ಏರ್ ಬಲೂನ್ ವೊಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಿದ್ದಿದೆ. ತಾಂತ್ರಿಕ ಉಪಕರಣವನ್ನು ಒಳಗೊಂಡಿದ್ದ ಈ ಏರ್ ಬಲೂನ್ ಅನ್ನು ನೋಡಿದ ಗ್ರಾಮಸ್ಥರು ಆತಂಕಕೊಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅದನ್ನು ಪರಿಶೀಲಿಸಿದ್ದು, ಈ ವೇಳೆ ಅದು ಹವಾಮಾನ ಅಧ್ಯಯನಕ್ಕಾಗಿ ಹೈದರಾಬಾದ್ ನಿಂದ ಆಕಾಶಕ್ಕೆ ಹಾರಿಸಿದ್ದ ಏರ್ ಬಲೂನ್ (ಸ್ಯಾಟ್ ಲೈಟ್ ಪೇಲೋಡ್ ಬಲೂನ್) ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ತಾಂತ್ರಿಕ ಉಪಕರಣವನ್ನು ಒಳಗೊಂಡ ಈ ಏರ್ ಬಲೂನ್ ಅನ್ನು ಹೈದರಾಬಾದ್ ನ TIFR(Tata Institute of Fundamental Research) ಬಲೂನ್ ಕೇಂದ್ರದಿಂದ ಜ.17ರಂದು ರಾತ್ರಿ 10 ಗಂಟೆ ಸುಮಾರಿಗೆ ಹಾರಿ ಬಿಡಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ಏರ್ ಬಲೂನ್ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದೆ.
ಇದನ್ನು ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಬಲೂನ್ ಕೇಂದ್ರ ಸರ್ಕಾರದ ಅಧ್ಯಯನದ ಅಡಿಯಲ್ಲಿ ಬರುವ ಸಂಶೋಧನಾ ಸ್ಯಾಟ್ ಲೈಟ್ ಪೇಲೋಡ್ ಆಗಿದೆ. ಇದರ ಕಾರ್ಯಾವಧಿ 6-7 ತಾಸು ಎಂದು ತಿಳಿದುಬಂದಿದೆ.
ಗ್ರಾಮಸ್ಥರಿಗೆ ಮನವಿ
ಇನ್ನು ಈ ಬಲೂನ್ ನಲ್ಲಿ ಕೆಲ ಬರವಣಿಗೆಗಳು ಕೂಡ ದೊರೆತಿದ್ದು, ಅದರಲ್ಲಿ, "ಇದು ಹವಾಮಾನ ಅಧ್ಯಯನಕ್ಕಾಗಿ ಹಾರಿ ಬಿಡಲಾಗಿದ್ದು, ಎಲ್ಲಾದರೂ ಬಿದ್ದಿದ್ದು ಕಂಡುಬಂದಲ್ಲಿ ಹಾಳು ಮಾಡಬೇಡಿ. ಕೂಡಲೇ ಕರೆ ಮಾಡಿ ಮಾಹಿತಿ ನೀಡಿ" ಎಂದು ಸಂಪರ್ಕ ಸಂಖ್ಯೆಯನ್ನು ಒಳಗೊಂಡ ಮಾಹಿತಿ ಪತ್ರವನ್ನು ಇಂಗ್ಲಿಷ್, ಕನ್ನಡ, ಮರಾಠಿಯಲ್ಲಿ ಬರೆದು ಬಲೂನ್ ನಲ್ಲಿ ನೇತು ಹಾಕಲಾಗಿದೆ.
ಗ್ರಾಮಕ್ಕೆ ದೌಡಾಯಿಸಿದ ಬಲೂನ್ ಕೇಂದ್ರದ ಅಧಿಕಾರಿಗಳು
ಈ ನಡುವೆ ತಾಂತ್ರಿಕ ಅಂಶಗಳನ್ನು ಅಳವಡಿಸಿರುವ ಕಾರಣ ಹೈದರಾಬಾದ್ ಬಲೂನ್ ಕೇಂದ್ರದ ಅಧಿಕಾರಿಗಳು ಕೂಡ ಅದನ್ನು ಹಿಂಬಾಲಿಸಿಕೊಂಡು ಜಲಸಂಗಿ ಗ್ರಾಮಕ್ಕೆ ತಲುಪಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೆ ಯಂತ್ರದ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಇಂತಹ ಬಲೂನ್ ಗಳನ್ನು ವರ್ಷದಲ್ಲಿ ಎರಡು ಋತುಗಳಲ್ಲಿ ಹಾರಿಸಿ ಪರಿಸರದಲ್ಲಿನ ವಾತಾವರಣದ ಕುರಿತು ಪರೀಕ್ಷೆ ನಡೆಸುತ್ತವೆ ಎಂದು ಸ್ಥಳದಲ್ಲಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುವಕನಿಗೆ ಗಾಯ
ಇನ್ನು ಬಲೂನ್ ಗ್ರಾಮದಲ್ಲಿ ಬೀಳುವಾಗ ಅಲ್ಲಿಯೇ ಇದ್ದ ಯುವಕನೋರ್ವನಿಗೆ ಚಿಕ್ಕಪುಟ್ಟ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಲೂನ್ ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಯುವಕನಿಗೆ ಪರಿಹಾರ ಹಣವನ್ನು ನೀಡಿ, ಬಲೂನ್ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.