HT Sangliana: ಬೆಂಗಳೂರು ರೌಡಿಗಳ 'ಸಿಂಹಸ್ವಪ್ನ' ಹೆಚ್ ಟಿ ಸಾಂಗ್ಲಿಯಾನ ಈಗ ಹೇಗಿದ್ದಾರೆ? Video
ಬೆಂಗಳೂರು: 80-90ರ ದಶಕದಲ್ಲಿ ಬೆಂಗಳೂರು ರೌಡಿಗಳ ಸಿಂಹಸ್ವಪ್ನವಾಗಿದ್ದ ಕರ್ನಾಟಕದ ಸೂಪರ್ ಕಾಪ್ ಮಾಜಿ ಐಪಿಎಸ್ ಅಧಿಕಾರಿ ಹೆಚ್ ಟಿ ಸಾಂಗ್ಲಿಯಾನ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಕೆಲ ಖಡಕ್ ಪೊಲೀಸ್ ಅಧಿಕಾರಿಗಳ ಹೆಸರು ಎಷ್ಟೇ ವರ್ಷಗಳಾದರೂ ಮಾಸುವುದಿಲ್ಲ. ಈ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಹೆಸರು ಎಂದರೆ ಖಡಕ್ ಐಪಿಎಸ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಎಚ್.ಟಿ.ಸಾಂಗ್ಲಿಯಾನ.
ಕರ್ನಾಟಕ ಪೊಲೀಸ್ ಇಲಾಖೆ ಅದರಲ್ಲೂ ಬೆಂಗಳೂರು ರೌಡಿಲೋಕದ ಸಿಂಹಸ್ವಪ್ನರಾಗಿದ್ದ ಸಾಂಗ್ಲಿಯಾನ ಅವರದ್ದು ಒಂದು ಮೈಲಿಗಲ್ಲು. ಅವರ ಕಾರ್ಯವೈಖರಿಯಿಂದಲೇ ಕರ್ನಾಟಕ ಪೊಲೀಸ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು ಸಾಂಗ್ಲಿಯಾನ.
ತಮ್ಮ ಖಡಕ್ ನಡೆ ಮತ್ತು ದಕ್ಷತೆಯಿಂದಲೇ ಖ್ಯಾತಿ ಗಳಿಸಿದ್ದ ಸಾಂಗ್ಲಿಯಾನ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳ ಪೈಕಿ ಮುಂಚೂಣಿಯಲ್ಲಿದ್ದರು. ಇವರಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ನಟ ಶಂಕರ್‌ನಾಗ್ ಅಭಿನಯದ ಸಾಂಗ್ಲಿಯಾನ ಸಿನಿಮಾ ಕೂಡ ತೆರೆಕಂಡು ಸಖತ್ ಹಿಟ್ ಕಂಡಿತ್ತು. ಈ ಪಾತ್ರಕ್ಕೆ ನಿಜವಾದ ಪ್ರೇರಣೆ ಕೂಡ ಸಾಂಗ್ಲಿಯಾನ ಅವರೇ ಆಗಿದ್ದರು. ಎಸ್.ಪಿ.ಸಾಂಗ್ಲಿಯಾನ ಸಿನಿಮಾ ಬಂದ ನಂತರವಂತೂ ಈ ಹೆಸರು ಕರ್ನಾಟಕದಲ್ಲಿ ಮತ್ತಷ್ಟು ಜನಪ್ರಿಯವಾಯಿತು. ಬಳಿಕ ಸಾಂಗ್ಲಿಯಾನ ಅವರು ನಿವೃತ್ತರಾಗಿದ್ದರು.
ಈಗ ಹೇಗಿದ್ದಾರೆ ಸಾಂಗ್ಲಿಯಾನ?
ಇಷ್ಚಕ್ಕೂ ಸಾಂಗ್ಲಿಯಾನ ಈಗ ಹೇಗಿದ್ದಾರೆ..? ಈಗ ಏಕೆ ಅವರ ಬಗ್ಗೆ ಸುದ್ದಿ ಎಂದರೆ.. ಇತ್ತೀಚಿನ ಅವರ ವಿಡಿಯೋ.. ಹೌದು.. ಸಾಂಗ್ಲಿಯಾನ ಅವರು ನಿವೃತ್ತರಾದ ಬಳಿಕ ತಮ್ಮ ಕುಟುಂಬಸ್ಥರೊಂದಿಗೆ ನಿವೃತ್ತಿ ಜೀವನ ಸಾಗಿಸುತ್ತಿದ್ದು, ಹಲವು ವರ್ಷಗಳಿಂದ ಕಾಣಿಸಿಕೊಳ್ಳದ ಸಾಂಗ್ಲಿಯಾನ ಇದೀಗ ವಿಡಿಯೋವೊಂದರ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಮನಾಲಿಯಲ್ಲಿ ಕುಟುಂಬಸ್ಥರೊಂದಿಗೆ ನೆಲೆಸಿರುವ ಸಾಂಗ್ಲಿಯಾನ ಊರುಗೋಲಿನ ನೆರವಿನಿಂದ ವಾಕಿಂಗ್ ಗೆ ತೆರಳುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಸಾಂಗ್ಲಿಯಾನ ಅವರಿಗೆ ವಯಸ್ಸಾಗಿದ್ದು, ಕೈಯಲ್ಲಿ ಕೋಲು ಹಿಡಿದು ನಡೆದಾಡುತ್ತಿರುವ ವಿಡಿಯೋ ಅನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದು ಕರ್ನಾಟಕದ ಟಾಪ್ ಪೋಲೀಸ್ ಆಫೀಸರ್ ಆಗಿದ್ದ ಸಾಂಗ್ಲಿಯಾನ ಸರ್.. ಇಂದು ಹೀಗಿದ್ದಾರೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಸಾಂಗ್ಲಿಯಾನ ಹಿನ್ನಲೆ
ಕರ್ನಾಟಕದ ಖಡಕ್ ಪೋಲೀಸ್ ಅಧಿಕಾರಿಗಳಾಗಿ ಹೆಸರು ಮಾಡಿದ ಸಾಂಗ್ಲಿಯಾನ ಅವರು ಮಿಜೋರಾಂನವರು. 1942ರ ಜೂನ್ 1ರಂದು ಜನಿಸಿದ ಸಾಂಗ್ಲಿಯಾನ ಅವರು ಭಾರತೀಯ ಪೋಲಿಸ್ ಸೇವೆಯ (ಐಪಿಎಸ್) 1967ರ ಬ್ಯಾಚ್‌ನಿಂದ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಬಂದರು.
ಬೆಂಗಳೂರು ರೌಡಿಗಳ 'ಸಿಂಹಸ್ವಪ್ನ' ಹೆಚ್ ಟಿ ಸಾಂಗ್ಲಿಯಾನ
ಸಾಂಗ್ಲಿಯಾನ ಅವರು ಸೇವೆ ಸಲ್ಲಿಸಿದ ಭಾಗಗಳಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ಅವರು ಕಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಅಲ್ಲದೆ ಅವರು ಟ್ರಾಫಿಕ್ ವಿಭಾಗದ ಮುಖ್ಯಸ್ಥರಾದಾಗ ಅವರು ಮುಖ್ಯವಾಗಿ ಅಡ್ಡಾದಿಡ್ಡಿ ಪಾರ್ಕಿಂಗ್, ವಾಹನ ಚಾಲನೆ, ರಸ್ತೆ ದಾಟುವಾಗ ಜನರ ನಿರ್ಲಕ್ಷ್ಯ ಸೇರಿದಂತೆ ಕಾನೂನಿನ ಬಗ್ಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತಿದ್ದರು. ಮುಖ್ಯವಾಗಿ ಸಾಂಗ್ಲಿಯಾನ ಅವರು ಯಾವುದೇ ರಾಜಕೀಯ ಒತ್ತಡಗಳಿಗೆ ಬಗ್ಗುತ್ತಿರಲಿಲ್ಲ.
ಈ ವಿಚಾರದಿಂದಲೇ ಅವರು ಪ್ರಖ್ಯಾತಿ ಪಡೆದಿದ್ದರು. ಅಲ್ಲದೆ ವಿಶೇಷ ಪೋಲೀಸ್ ಕಮಿಷನರ್ ಆಗಿದ್ದಾಗ ಸಾಂಗ್ಲಿಯಾನ ಅವರು ಹಿರಿಯ ಅಧಿಕಾರಿಯ ಪತ್ನಿ ಮನೆಗೆ ತರಲು ಪೊಲೀಸ್ ವಾಹನ ಬಳಸಿದ್ದಕ್ಕೆ ಅವರ ವಿರುದ್ಧವೇ ಕೇಸ್ ದಾಖಲಿಸಿದ್ದರು. ಈ ಘಟನೆ ಕೂಡ ಸಾಂಗ್ಲಿಯಾನ ಚಿತ್ರದಲ್ಲಿ ಒಂದು ಭಾಗವಾಗಿತ್ತು.
ಬೆಂಗಳೂರಿನ ಉರ್ದು ವಾರ್ತೆ ಗಲಾಟೆ ವೇಳೆ ಹೇರಲಾಗಿದ್ದ ಕರ್ಫ್ಯೂ ವೇಳೆ ಜಗಜೀವನ್ ರಾಂನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಸಾಂಗ್ಲಿಯಾನ ಅಂತಹ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಈಗಲೂ ಈ ಭಾಗದಲ್ಲಿ ಸಾಂಗ್ಲಿಯಾನರ ಕಾರ್ಯವೈಖರಿಯನ್ನು ಸ್ಥಳೀಯರು ನೆನೆಯುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ