MUDA case: ಸಿದ್ದು-ಡಿಕೆಶಿ ಗುರಿಯಾಗಿಸಲು ED ಬಳಕೆ: ಕಾಂಗ್ರೆಸ್ ಆರೋಪ
ಹುಬ್ಬಳ್ಳಿ: ಮುಡಾ ಹಗರಣದ ತನಿಖೆಯ ಭಾಗವಾಗಿ 300 ಕೋಟಿ ಮೌಲ್ಯದ 142 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಇಡಿ ಕ್ರಮವು ಬೆಳಗಾವಿಯಲ್ಲಿ ಮುಂಬರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಕ್ತವಾಗುವ ಅಗಾಧ ಪ್ರತಿಕ್ರಿಯೆಗೆ ಮೋದಿ ಸರ್ಕಾರದ ಭಯದ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.
ಸಮಾವೇಶಕ್ಕೆ ತೊಂದರೆ ಕೊಡುವ ಕಾರಣಕ್ಕಾಗಿಯೇ ಮುಡಾ ವಿಚಾರದಲ್ಲಿ ಇ.ಡಿ.(ಜಾರಿ ನಿರ್ದೇಶನಾಲಯ)ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ನೆಹರೂ, ಮನಮೋಹನ ಸಿಂಗ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ದಕ್ಷಿಣ ಭಾರತದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಹಲವರನ್ನು ನಿತ್ಯವೂ ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಇದೀಗ ಇ.ಡಿಯನ್ನು ಸಿದ್ದರಾಮಯ್ಯ ಅವರ ವಿರುದ್ಧ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರು ಸಂವಿಧಾನ ವಿರೋಧಿಗಳು, ಅವರು ಯಾವಾಗಲೂ ಸಾಮಾಜಿಕ ನ್ಯಾಯದ ವಿರುದ್ಧ ಇರುವವರು. ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನ ಉಳಿಸುವ ಅಂಬೇಡ್ಕರ್ ಹಾಗೂ ಗಾಂಧಿ ವಿಚಾರಗಳನ್ನು ಪಸರಿಸುವ ಕೆಲಸವನ್ನು ಸಮಾವೇಶದ ಮೂಲಕ ಮಾಡುತ್ತಿದ್ದೇವೆ ಹೀಗಾಗಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಹೆದರಿದ್ದಾರೆ ಎಂದರು.
ಇದಕ್ಕೂ ಮುನ್ನ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಕ್ಷದ ಮುಖಂಡರನ್ನು ಭೇಟಿ ಮಾಡಿದ ಸುರ್ಜೇವಾಲಾ ಮತ್ತು ಡಿಕೆ ಶಿವಕುಮಾರ್ ಸಮಾವೇಶದ ಕುರಿತು ಪಕ್ಷದ ಕಾರ್ಯಕರ್ತರನ್ನು ಕರೆತರುವ ಬಗ್ಗೆ ಚರ್ಚಿಸಿದರು. ಈ ನಾಲ್ಕು ಜಿಲ್ಲೆಗಳಿಂದ ಸುಮಾರು 70 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದರು.
ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಹೊರಗಿಡುವ ಯತ್ನದ ಕುರಿತ ಪ್ರಶ್ನೆಗೆ ಉತ್ತರಿಸಿ, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹೋರಾಟ ಮಾಡುತ್ತಿವೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ 15 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿತ್ತು. ದೆಹಲಿಯಲ್ಲಿ ಅಭಿವೃದ್ಧಿ ಆಗಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ನಂತರ ದೆಹಲಿ ವಾಯು ಮಾಲಿನ್ಯ, ಕೊಳೆಗೇರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸುತ್ತಿದೆ. ದೇಶದ ಎಲ್ಲಾ ಭಾಗಗಳಿಂದ ದಿಲ್ಲಿಗೆ ಹೋಗುವ ಜನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ಮೋದಿ ಅವರ ಸರ್ಕಾರ ಹಾಗೂ ಆಪ್ ಸರ್ಕಾರ ಪಾಲುದಾರರಾಗಿದ್ದು, ದೆಹಲಿಯ ಸಮಸ್ಯೆಗೆ ಕಾಂಗ್ರೆಸ್ ಪರಿಹಾರವಾಗಿದೆ. ದೆಹಲಿಗೆ ಹೊಸ ಸ್ವರೂಪ ನೀಡಲು ನಾವು ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಪಕ್ಷವಾಗಿ ಜನರಿಗೆ ಉತ್ತಮ ಪರ್ಯಾಯ ಆಯ್ಕೆಯಾಗಿರುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡು ಈಗ ದೂರವಾಗಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, “ಪ್ರತಿ ಚುನಾವಣೆಯೂ ಭಿನ್ನ ಚುನಾವಣೆಯಾಗಿದೆ. ಒಂದು ಚುನಾವಣೆಯಲ್ಲಿ ಆಗಿದ್ದೆ ಮತ್ತೊಂದು ಚುನಾವಣೆಯಲ್ಲಿ ಆಗಬೇಕು ಎಂಬುದಿಲ್ಲ. ನಾವು ದಿಲ್ಲಿಯಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತಿದ್ದೇವೆ. ಶೀಲಾ ದೀಕ್ಷಿತ್ ಅವರ ಕಾಲದಲ್ಲಿ ಸಿಕ್ಕ ಆಡಳಿತ ಮತ್ತೆ ಸಿಗಲಿ ಎಂದು ಅಲ್ಲಿನ ಜನ ಕಾಯುತ್ತಿದ್ದಾರೆ ಎಂದು ತಿಳಿಸಿದರು.