
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಜನವರಿ 23 ರಿಂದ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು, ಸುಮಾರು 10 ದೇಶಗಳ ಪ್ರತಿನಿಧಿಗಳು ಮತ್ತು ಭಾರತದ 25 ಕ್ಕೂ ಹೆಚ್ಚು ರಾಜ್ಯಗಳ ಕೃಷಿ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಸಹ ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಲು ಮೇಳದಲ್ಲಿ ಉತ್ಪಾದಕರು-ಮಾರಾಟಗಾರರ ಸಮಾಲೋಚನಾ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಮೇಳದಲ್ಲಿ 300 ಮಳಿಗೆಗಳು ಇರಲಿದ್ದು,141 ಖರೀದಿದಾರರು ಮತ್ತು 125 ಮಾರಾಟಗಾರರು ಸಭೆಗೆ ನೋಂದಾಯಿಸಿಕೊಂಡಿದ್ದಾರೆ.
ಭಾರತೀಯ ರಾಗಿ ಸಂಶೋಧನಾ ಸಂಸ್ಥೆ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಮತ್ತಿತರ ಸಂಶೋಧನಾ ಸಂಸ್ಥೆಗಳಿಂದ ಸಿರಿಧಾನ್ಯ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಇತರ ತಂತ್ರಜ್ಞಾನಗಳ ಪ್ರದರ್ಶನಗಳು ಇರುತ್ತದೆ ಎಂದು ಸಚಿವರು ತಿಳಿಸಿದರು.
ರೈತರು ತಲೆಮಾರುಗಳಿಂದ ಬೆಳೆಸಿಕೊಂಡು ಬಂದಿರುವ ವಿವಿಧ ತಳಿಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಕೃಷಿಯಲ್ಲಿ ತೊಡಗಿರುವ ಮೂವತ್ತು ರೈತರು ತಮ್ಮ ಸ್ಥಳೀಯ ಮಾದರಿಗಳನ್ನು ಮೇಳದಲ್ಲಿ ಪ್ರದರ್ಶಿಸಲಿದ್ದಾರೆ.
ಮಣ್ಣಿನ ಪ್ರಾಮುಖ್ಯತೆ, ಗುಣಲಕ್ಷಣಗಳು, ವರ್ಗೀಕರಣ ಮತ್ತು ಸ್ವರೂಪದ ಬಗ್ಗೆ ಜಾಗೃತಿ ಮೂಡಿಸುವ ಮಣ್ಣಿನ ಪೆಡನ್ ಪೆವಿಲಿಯನ್ ಈ ಮೇಳದಲ್ಲಿ ವಿಶೇಷ ಆಕರ್ಷಣೆಯಾಗಲಿದೆ. ಕರ್ನಾಟಕದಲ್ಲಿ ಸಿರಿಧಾನ್ಯ ಬೆಳೆಯುವ ಒಟ್ಟು ವಿಸ್ತೀರ್ಣ 18.37 ಲಕ್ಷ ಹೆಕ್ಟೇರ್ ಆಗಿದ್ದು, ಸಿರಿಧಾನ್ಯ ಉತ್ಪಾದನೆಯಲ್ಲಿ ರಾಜಸ್ಥಾನದ ನಂತರ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
Advertisement