ಮಂಗಳೂರು: ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರ ದಾಳಿ; ವೇಶ್ಯಾವಾಟಿಕೆ ದಂಧೆ ಆರೋಪ; Video

ರಾಮ ಸೇನೆ ಕಾರ್ಯಕರ್ತರೇ ತಾವು ದಾಳಿ ನಡೆಸಿದ ಕೃತ್ಯವನ್ನು ವಿಡಿಯೋ ಮಾಡಿ, ಬಿಡುಗಡೆ ಮಾಡಿದ್ದಾರೆ.
ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರ ದಾಳಿ
ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರ ದಾಳಿ
Updated on

ಮಂಗಳೂರು: ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಆರೋಪಿಸಿದ್ದಾರೆ.

ಇಂದು ಮಧ್ಯಾಹ್ನ ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯಿರುವ ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕಾರ್ಯಕರ್ತರು ತೆಗೆದ ವೀಡಿಯೊ ದೃಶ್ಯಾವಳಿಯಲ್ಲಿ, ಮಹಿಳಾ ಸಿಬ್ಬಂದಿಯನ್ನು ಬೆದರಿಸುವುದು ಮತ್ತು ನಿಂದಿಸುವುದು ಕಂಡುಬಂದಿದೆ.

ರಾಮ ಸೇನೆ ಕಾರ್ಯಕರ್ತರು ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು, ಪೀಠೋಪಕರಣ ಮತ್ತು ಕಂಪ್ಯೂಟರ್ ಗಳನ್ನು ಧ್ವಂಸಗೊಳಿಸಿದ್ದು, ಅಲ್ಲಿದ್ದ ಕೆಲವು ಹುಡುಗಿಯರಿಗೆ ನೀವು ವೈಶಾವಾಟಿಕೆ ದಂಧೆ ನಡೆಸುತ್ತಿದ್ದೀರಿ ಎಂದು ಆವಾಜ್ ಹಾಕಿದ್ದಾರೆ. ಈ ವೇಳೆ ಹುಡುಗಿಯರು ಕೈಮುಗಿದು ನಮ್ಮ ಮೇಲೆ ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುವ ವಿಡಿಯೋ ವೈರಲ್ ಆಗಿದೆ.

ರಾಮ ಸೇನೆ ಕಾರ್ಯಕರ್ತರೇ ತಾವು ದಾಳಿ ನಡೆಸಿದ ಕೃತ್ಯವನ್ನು ವಿಡಿಯೋ ಮಾಡಿ, ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್​ಗಳ‌ನ್ನು ಮುಚ್ಚುವಂತೆ ರಾಮ ಸೇನಾ ಆಗ್ರಹಿಸಿದ್ದಾರೆ.

‘ಮಸಾಜ್​ ಸೆಂಟರ್​ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದು ಪ್ರಸಾದ್ ಅತ್ತಾವರ ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪಾರ್ಲರ್ ಅನ್ನು ಮುಚ್ಚಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು, ಬೆಳಿಗ್ಗೆ 11.51 ರ ಸುಮಾರಿಗೆ ಬಿಜೈ ಕೆಎಸ್‌ಆರ್‌ಟಿಸಿಯ ಆದಿತ್ಯ ಕಾಂಪ್ಲೆಕ್ಸ್ ಬಳಿಯ "ಕಲರ್ಸ್ ಯುನಿಸೆಕ್ಸ್ ಸಲೂನ್" ನಲ್ಲಿ, 9-10 ಅಪರಿಚಿತ ವ್ಯಕ್ತಿಗಳ ಗುಂಪು ಅಕ್ರಮವಾಗಿ ಆವರಣಕ್ಕೆ ಪ್ರವೇಶಿಸಿ ಆಸ್ತಿಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು. ಸಿಬ್ಬಂದಿಗಳ ಮೇಲೆ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿದ ದುಷ್ಕರ್ಮಿಗಳು, ಅವರಿಗೆ ಮತ್ತಷ್ಟು ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗುಂಪು ಸಲೂನ್ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾನಿಗೊಳಿಸಿದೆ ಎಂದು ವರದಿಯಾಗಿದೆ. "ಘಟನೆಯ ಸಮಯದಲ್ಲಿ ಇಬ್ಬರು ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಲಾಗಿದೆ. ಒಳನುಗ್ಗಿದವರಲ್ಲಿ ಒಬ್ಬರು ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಮಾಲೀಕರ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಕೈಗೊಳ್ಳಲಾಗಿದೆ" ಎಂದು ಅವರು ಹೇಳಿದರು.

ಈ ಮಧ್ಯೆ, ಸ್ಥಳದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆದಿಲ್ಲ ಎಂದು ಪಾರ್ಲರ್ ಮಾಲೀಕರು ಹೇಳಿದ್ದಾರೆ.

ಉಡುಪಿಯಲ್ಲಿದ್ದ ಗೃಹ ಸಚಿವ ಜಿ ಪರಮೇಶ್ವರ ಅವರು ಘಟನೆಯನ್ನು ಖಂಡಿಸಿದರು. ದಾಳಿ ಏಕೆ ನಡೆದಿದೆ ಎಂದು ತಮಗೆ ತಿಳಿದಿಲ್ಲ ಮತ್ತು ಪಾರ್ಲರ್‌ನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ, ಅದನ್ನು ಪೊಲೀಸರ ಗಮನಕ್ಕೆ ತರಬೇಕಾಗಿತ್ತು ಎಂದು ಹೇಳಿದರು. ಅಪರಾಧಿಗಳನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com