
ಬೆಂಗಳೂರು: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಸದ್ಯ ಕೇಂದ್ರದ ಮುಂದೆ ಬಾಕಿ ಉಳಿದಿರುವ ಪ್ರಮುಖ ಪ್ರಸ್ತಾವನೆಗಳಿಗೆ ಶೀಘ್ರವೇ ಅನುಮೋದನೆ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇಡೀ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಹಲವಾರು ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
ಶೈಕ್ಷಣಿಕ ಅಸಮಾನತೆಗಳನ್ನು ನಿವಾರಿಸುವಲ್ಲಿ ಮತ್ತು ಬೆಳವಣಿಗೆಗೆ ಅವಕಾಶಗಳನ್ನು ಉತ್ತೇಜಿಸುವಲ್ಲಿ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಸಂಸ್ಥೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಕೇಂದ್ರ ಸರ್ಕಾರದ ನಿರಂತರ ಆರ್ಥಿಕ ಮತ್ತು ಸಾಂಸ್ಥಿಕ ಬೆಂಬಲದ ಅಗತ್ಯವಿದೆ. ವಿಶ್ವವಿದ್ಯಾಲಯ ಮತ್ತು ಆ ಭಾಗದ ಪ್ರಗತಿಗೆ ನಿರ್ಣಾಯಕವಾದ ಹೊಸ ಸ್ನಾತಕೋತ್ತರ ವಿಭಾಗಗಳು, ಬೋಧನಾ ಹುದ್ದೆಗಳು ಮತ್ತು HEFA ಧನಸಹಾಯ ಪ್ರಸ್ತಾವನೆಗಳ ಮಂಜೂರಾತಿಗೆ ಕೇಂದ್ರ ಸರ್ಕಾರದ ಅನುಮೋದನೆ ಬಾಕಿಯಿದೆ ಎಂದು ಹೇಳಿದರು.
ಸ್ಟ್ಯಾಟಿಸ್ಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಸಸ್ಯ ಮತ್ತು ಪ್ರಾಣಿ ವಿಜ್ಞಾನ, ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಮತ್ತು ಬಿಎ/ಎಲ್‌ಎಲ್‌ಬಿ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ನಾತಕೋತ್ತರ ವಿಭಾಗಗಳನ್ನು ಸ್ಥಾಪಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಶಿಫಾರಸು ಮಾಡಿದೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
ಈ ಉದ್ದೇಶಿತ ವಿಭಾಗಗಳನ್ನು ಕಾರ್ಯಗತಗೊಳಿಸಲು 55 ಬೋಧಕ ಹುದ್ದೆಗಳ ಮಂಜೂರು ಮಾಡುವುದು ಅಗತ್ಯವಾಗಿದೆ. ಈ ಪ್ರಸ್ತಾವನೆಯು ಪ್ರಕ್ರಿಯೆಯ ಮುಂದುವರಿದ ಹಂತದಲ್ಲಿದೆ ಮತ್ತು ಅನುಮೋದನೆಗೆ ಕಾಯುತ್ತಿದೆ. ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (ಎಚ್‌ಇಎಫ್‌ಎ) ಅಡಿಯಲ್ಲಿ ಇತರ ಅಗತ್ಯ ಮೂಲಸೌಕರ್ಯಗಳೊಂದಿಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳನ್ನು ನಿರ್ಮಿಸಲು ವಿಶ್ವವಿದ್ಯಾಲಯ ಪ್ರಸ್ತಾವನೆ ಸಲ್ಲಿಸಿದೆ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
'ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮತ್ತು ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುವುದರಿಂದ, ಈ ವಿಷಯದಲ್ಲಿ ನಿಮ್ಮ ತುರ್ತು ಮಧ್ಯಸ್ಥಿಕೆಗೆ ನಾನು ವಿನಂತಿಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲು ನಾನು ಒತ್ತಾಯಿಸುತ್ತೇನೆ. ಆದ್ಯತೆಯ ಆಧಾರದ ಮೇಲೆ ಹೇಳಿದ ಪ್ರಸ್ತಾವನೆಗಳಿಗೆ ಶೀಘ್ರವೇ ಅನುಮೋದನೆ ನೀಡಿ' ಎಂದು ಮನವಿ ಮಾಡಿದ್ದಾರೆ.
Advertisement