
ಹೊನ್ನಾವರ: ಮೇಯಲು ಹೋಗಿದ್ದ ಗರ್ಭಿಣಿ ಹಸುವನ್ನು ಹತ್ಯೆ ಮಾಡಿ, ಮಾಂಸ ದೋಚಿದ್ದ ಘಟನೆ ನಡೆದು 6 ದಿನಗಳು ಕಳೆದರೂ ಪೊಲೀಸರಿಂದ ಕಟುಕರ ಬಂಧನ ಸಾಧ್ಯವಾಗಿಲ್ಲ.
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಕೃತ್ಯ ಹಚ್ಚಹಸಿರಾಗಿರುವಾಗಲೇ, ಹೊನ್ನಾವರ ತಾಲೂಕಿನಲ್ಲಿ ಅಂತಹದೇ ಮತ್ತೊಂದು ವಿಕೃತಿ ನಡೆದಿತ್ತು.
ಹೊನ್ನಾವರ ತಾಲೂಕಿನ ಸಾಲಕೋಡಿನ ಕೊಂಡಾಕುಳಿಯಲ್ಲಿ ಬೆಟ್ಟಕ್ಕೆ ಮೇಯಲು ಶನಿವಾರ (ಜ.18) ಹೋಗಿದ್ದ ಗರ್ಭಿಣಿ ಹಸುವಿನ ಕಾಲು, ರುಂಡ ಕಡಿದು, ಗರ್ಭದಲ್ಲಿ ಬೆಳೆಯುತ್ತಿದ್ದ ಕರುವಿನ ಭ್ರೂಣ ತೆಗೆದು ಹತ್ಯೆ ಮಾಡಲಾಗಿತ್ತು.
ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬವರಿಗೆ ಸೇರಿದ್ದ ಹಸು ಭೀಕರವಾಗಿ ಹತ್ಯೆಯಾಗಿತ್ತು. ಈ ಘಟನೆ ವಿರುದ್ಧ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹೊನ್ನಾವರ ಪಿಎಸ್‌ಐ ಮಂಜುನಾಥ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರತಿದಿನ ಮೇಯಲು ಹೋಗುವ ಆಕಳು ಸಂಜೆ ಐದು ಗಂಟೆಗೆ ಕೊಟ್ಟಿಗೆಗೆ ಮರಳುತ್ತಿತ್ತು. ಶನಿವಾರ ಸಂಜೆಯಾದರೂ ಬರಲಿಲ್ಲ. ಹುಡುಕಲು ಹೋದರೂ ಸಿಗದೆ ಮನೆಗೆ ಮರಳಿದೆ. ಬೆಳಗ್ಗೆ ಮತ್ತೆ ಹುಡುಕಲು ಹೋದಾಗ ಬೆಟ್ಟದಲ್ಲಿ ಆಕಳು ರುಂಡ ಬಿದ್ದಿರುವುದು, ಆ ಕಡೆ ಈ ಕಡೆ ನೋಡಿದಾಗ ಅದರ ಕಾಲುಗಳ ಪಾದಗಳನ್ನು ಕತ್ತರಿಸಿ ಬಿಸಾಡಿರುವುದು ಕಂಡು ಬಂದಿದೆ. ದೇಹದ ಭಾಗ-ಮಾಂಸ ಮಾತ್ರ ಒಯ್ದಿದ್ದಾರೆ. ಆಕಳು ಐದಾರು ತಿಂಗಳ ಗರ್ಭಿಣಿ ಇರಬಹದು. ಅದರ ಹೊಟ್ಟೆಯೊಳಗಿರುವ ಕರುವಿನ ಭ್ರೂಣ ಹೊರತೆಗೆದು ಸೀಳಿ ಹತ್ಯೆ ಮಾಡಿ ಬಿಸಾಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಗೃಹ ಇಲಾಖೆ ಐಜಿಪಿ ಹಾಗೂ ಉತ್ತರ ಕನ್ನಡ ಎಸ್ಪಿ ಜತೆ ಪ್ರತ್ಯೇಕ ಸಭೆ ನಡೆಸಿದ್ದರು. ಗೋ ಹತ್ಯೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಹಂತಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು.
ಇದರ ಬೆನ್ನಲ್ಲೇ ಹೊನ್ನಾವರದಲ್ಲಿ ಬೀಡು ಬಿಟ್ಟಿರುವ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಂ ನಾರಾಯಣ ಅವರು, ಅಕ್ರಮ ಗೋಮಾಂಸ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಹಲವರನ್ನು ವಿಚಾರಣೆ ನಡೆಸಿದ್ದಾರೆ. ಐವರನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧನಕ್ಕೊಳಪಡಿಸಿಲ್ಲ.
ಪೊಲೀಸರ ಆರು ತಂಡಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳು ಭಟ್ಕಳ ಅಥವಾ ಉಡುಪಿ ಜಿಲ್ಲೆಯವರಾಗಿದ್ದಾರೆಂದು ತಿಳಿದುಬಂದಿದೆ. ಶೀಘ್ರದಲ್ಲೇ ಬಂಧನಕ್ಕೊಳಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
Advertisement