
ಬಳ್ಳಾರಿ: ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸುನೀಲ್ ಅವರು ಪತ್ತೆಯಾಗಿದ್ದು, ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಸುನೀಲ್ ಅವರು ಬೆಳಿಗ್ಗೆ ವಾಕಿಂಗ್ ತೆರಳಿದ್ದ ವೇಳೆ ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ಬಳಿಕ ಬಿಡುಗಡೆಗೆ 6 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಬೆನ್ನಲ್ಲೇ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿ, ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದರು,
ಉದ್ಯಾನವನದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳಲ್ಲಿ ನಾಲ್ಕು ವೈದ್ಯರನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅಪಹರಣಕಾರರು ಡಾ ಸುನೀಲ್ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಈ ನಡುವೆ ಅಹರಣಕಾರರು ಸುನೀಲ್ ಅವರನ್ನು ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲವೊಂದರಲ್ಲಿ ಬಿಟ್ಟು ಹೋಗಿದ್ದು, ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರು ಪತ್ತೆ ಮಾಡಿ, ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಇದೀಗ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಅಪಹರಣ ಮಾಡಿದವರು ಯಾರು ಎಂಬ ಬಗ್ಗೆ ಇದುವರೆಗೂ ಸುಳಿವು ಸಿಕ್ಕಿಲ್ಲ.
ಘಟನೆಗೆ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದೂ ಕಿಡಿಕಾರಿದ್ದಾರೆ.
Advertisement