ಉಡುಪಿ: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ
ಉಡುಪಿ: ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಗಲಕೋಟೆಯ ಹುನಗುಂದದ ಸುಳೇಬಾವಿ ಗ್ರಾಮದ ಮುತ್ತು (35) ಎಂಬ ವ್ಯಕ್ತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಶ್ರೀ ಕೃಷ್ಣ ಮಠದ ಬಳಿಯ ವಾದಿರಾಜ್ ಮೂರನೇ ಕ್ರಾಸ್‌ನಿಂದ ಭಾನುವಾರ ಸಂಜೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿ ಉಡುಪಿಯಲ್ಲಿ ಯಾವುದೇ ಶಾಶ್ವತ ವಿಳಾಸವಿಲ್ಲದೆ ಅಲೆದಾಡುತ್ತಿದ್ದ. ಜನವರಿ 23 ರಂದು ಅಪ್ರಾಪ್ತ ಮಗುವಿಗೆ ಚಾಕೊಲೇಟ್ ನೀಡಿ ಅನುಚಿತವಾಗಿ ಸ್ಪರ್ಶಿಸುವ ಮೂಲಕ ಆತ ಲೈಂಗಿಕ ಕಿರುಕುಳ ನೀಡಿದ್ದ. ಸಂಬಂಧಿಕರ ಅಂಗಡಿಯ ಬಳಿ ಬಾಲಕಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆ ವ್ಯಕ್ತಿ ಆಕೆಯನ್ನು ಅಂಗಡಿಯಿಂದ 20 ಮೀಟರ್ ದೂರಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ.
ಘಟನೆಯ ನಂತರ, ಶಂಕಿತನನ್ನು ಪತ್ತೆಹಚ್ಚಲು ಐದು ತಂಡಗಳನ್ನು ರಚಿಸಲಾಗಿತ್ತು . ಆರೋಪಿಯ ಚಿತ್ರವನ್ನು ಬಿಡುಗಡೆ ಮಾಡಲು ಪೊಲೀಸರು ವಿವಿಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಸಾರ್ವಜನಿಕರ ಸಹಾಯ ಮತ್ತು ಪೊಲೀಸರ ನಿರಂತರ ಪ್ರಯತ್ನದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ