
ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅವರು ನಿಧನರಾಗಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ದೇವಸ್ಥಾನವೊಂದರ ಮುಂದೆ ಅಂಧ ಸಹೋದರಿಯರಾದ ಮಂಜಮ್ಮ–ರತ್ನಮ್ಮ ಅವರು ಹಾಡುತ್ತಿದ್ದರು. ಬಳಿಕ ʼಸರಿಗಮಪʼ ಶೋನಲ್ಲಿ ಭಾಗಿಯಾದ ಬಳಿಕ ಇಬ್ಬರೂ ಜನಪ್ರಿಯತೆ ಪಡೆದುಕೊಂಡಿದ್ದರು. ಇದೀಗ ಮಂಜಮ್ಮ ನಿಧನ ಹಿನ್ನೆಲೆಯಲ್ಲಿ ಅಕ್ಕ ರತ್ನಮ್ಮ ಕಂಗಾಲಾಗಿದ್ದಾರೆ.
ಇಬ್ಬರೂ ಅಕ್ಕ-ತಂಗಿ. ಹುಟ್ಟಿನಿಂದ ಇಬ್ಬರಿಗೂ ಕಣ್ಣಿಲ್ಲ. ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಂಗೀತ ಕಲಿತಿಲ್ಲ. ಹೊಟ್ಟೆಪಾಡಿಗಾಗಿ ಹಾಡಲು ಆರಂಭಿಸಿದವರಾಗಿದ್ದರು. ಅದೇ ಅವರ ವೃತ್ತಿಯೂ ಆಗಿತ್ತು. ಇದೀಗ ಮಂಜಮ್ಮ ನಿಧನ ಹಿನ್ನೆಲೆಯಲ್ಲಿ ರತ್ನಮ್ಮರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
Advertisement