
ಕೋಲಾರ: ನ್ಯಾಯಾಲಯದ ಅನುಮತಿ ಮೇರೆಗೆ ಕೇಂದ್ರ ವಲಯ ವ್ಯಾಪ್ತಿಯ 6 ವಲಯಗಳಲ್ಲಿ ವಶಪಡಿಸಿಕೊಂಡ 394 ಕೆಜಿ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಲಾಭುರಾಮ್ ಅವರು ಸೋಮವಾರ ಮಾಹಿತಿ ನೀಡಿದರು.
ಕೋಲಾರ ಜಿಲ್ಲೆಯಲ್ಲಿ 97.624 ಕೆಜಿ, ಕೆಜಿಎಫ್‌ನಲ್ಲಿ 83.45 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ತುಮಕೂರು ಜಿಲ್ಲಾ ಪೊಲೀಸರು 51.7 ಕೆಜಿ ಗಾಂಜಾ ಮತ್ತು 47 ಗ್ರಾಂ ಎಂಡಿಎಂಎ, ರಾಮನಗರ ಜಿಲ್ಲಾ ಪೊಲೀಸರು 27.8 ಕೆಜಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು 24.760 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದುರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 112.67 ಕೆಜಿ ಗಾಂಜಾ ಮತ್ತು 5 ಲೀಟರ್ ಗಾಂಜಾ ಸಾಂದ್ರೀಕರಣ ವಶಪಡಿಸಿಕೊಳ್ಳಲಾಗಿತ್ತು. ಈ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
6 ಜಿಲ್ಲೆಗಳನ್ನು ಒಳಗೊಂಡಿರುವ ಕೇಂದ್ರ ವಲಯವು ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯಿಂದ ಮತ್ತು ಸಮಾಜವನ್ನು ರಕ್ಷಿಸುವ ಸಲುವಾಗಿ ಮಾದಕವಸ್ತುಗಳ ದುರುಪಯೋಗ, ಸೈಬರ್ ಅಪರಾಧ ಹಾಗೂ ಐಎಂವಿ(ಮೋಟಾರು ವಾಹನ ಕಾಯ್ದೆ ಉಲ್ಲಂಘನೆ) ಉಲ್ಲಂಘನೆಯ ಬಗ್ಗೆ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಶಾಲೆ, ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯಲ್ಲಿ ಹೆಚಾಗಿ ತೊಡಗಿಸಿಕೊಳ್ಳುತ್ತಿರುವುದಾಗಿ ವರದಿ ಬಂದಿರುವುದನ್ನು ಪರಿಗಣಿಸಿ ಅವರ ಭವಿಷ್ಯವನ್ನು ರಕ್ಷಿಸಲು ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ.
ಇದೇ ವೇಳೆ, ಪೋಷಕರು ತಮ್ಮ ಮಕ್ಕಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಮತ್ತು ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
6 ಜಿಲ್ಲೆಗಳಲ್ಲಿಯೂ ಆದ್ಯತೆಯ ಆಧಾರದ ಮೇಲೆ ಜಾಗೃತಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಬ್ ಇನ್‌ಸ್ಪೆಕ್ಟರ್‌ನಿಂದ ಹಿಡಿದು ಉಪ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರವರೆಗಿನ ಎಲ್ಲ ಪೊಲೀಸ್ ಅಧಿಕಾರಿಗಳು ಈ ಜಾಗೃತಿ ಅಭಿಯಾನಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ” ಎಂದರು.
ಮಾದಕ ವಸ್ತುಗಳ ಅಪಾಯಗಳು, ಸೈಬರ್ ಅಪರಾಧ ಮತ್ತು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಗಳು ಅವರ ಜೀವಕ್ಕೆ ಅಪಾಯವನ್ನುಂಟು ಮಾಡುವುದಲ್ಲದೆ ಇತರರನ್ನೂ ಅಪಾಯಕ್ಕೆ ತಳ್ಳುತ್ತದೆ. ಹಾಗಾಗಿ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಅಪ್ರಾಪ್ತರು ವಾಹನ ಚಾಲನೆ, ತ್ರಿವಳಿ ಸವಾರಿ ಮತ್ತು ಸ್ಟಂಟ್ ರೈಡಿಂಗ್ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
Advertisement