ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರಿನ ದರ ಏರಿಕೆಯ ಬಗ್ಗೆ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀರು ನೀಡಲು ಆಗುತ್ತದೆ. ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ'. ಜಲ ಮಂಡಳಿಗೆ 1 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಚರ್ಚೆಯ ನಂತರ ಬೆಲೆ ಏರಿಕೆ ಬಗ್ಗೆ ತಿಳಿಸಲಾಗುವುದು. ಇದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಒಂದು ಲೀಟರ್‌ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಇದರಿಂದ ನೀರಿನ ಬಳಕೆಯ ಲೆಕ್ಕ ದೊರೆಯಲಿ ಎನ್ನುವುದು ಇದರ ಉದ್ದೇಶ' ಎಂದು ಡಿಸಿಎಂ ಹೇಳಿದ್ದಾರೆ.
ಮುಡಾ ನಿವೇಶನ ಹಂಚಿಕೆ ಅಕ್ರಮ ಕುರಿತಂತೆ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈಗ ಜೆಡಿಎಸ್ ಶಾಸಕ ಜಟಿ ದೇವೇಗೌಡ ವಿರುದ್ಧ ಇಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಜಿಟಿ ದೇವೇಗೌಡ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಜಿಟಿ ದೇವೇಗೌಡ ಅವರು ತಮ್ಮ ಸಹೋದರಿಯ ಮಗ ಮಹೇಂದ್ರ ಹೆಸರಿನಲ್ಲಿ ಬೇನಾಮಿಯಾಗಿ ಪರಿಹಾರ ಪಡೆದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ದೇವನೂರು ಗ್ರಾಮದ ಗುಂಗ್ರಾಲ್ ಛತ್ರದ ಸರ್ವೆ ನಂ.81/2 ರಲ್ಲಿದ್ದ ಮಹೇಂದ್ರಗೆ ಸೇರಿದ 2.22 ಎಕರೆ ಭೂಮಿಯನ್ನು ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ ಬದಲಿ ನಿವೇಶನ ಮಂಜೂರು ಕೂಡ ಮಾಡಲಾಗಿದೆ. ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವಇಚ್ಛೆಯಿಂದ ಭೂಮಿ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದು ಆಗಿದ್ದು, ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ ಗಳು ಮಾತ್ರ. ಆದರೆ, ಅವರಿಗೆ ಪರಿಹಾರವಾಗಿ 19 ನಿವೇಶನಗಳನ್ನು ನೀಡಲಾಗಿದೆ ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಗೆ ಹಾಕಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅನುಸೂಚಿತ ಜಾತಿ, ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಜೊತೆ ಸಭೆ ನಡೆಸಿದ ಸಿಎಂ, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕು ಪತ್ರ ಸಮರ್ಪಕವಾಗಿ ನೀಡಬೇಕು. ಜಾತಿ ದೌರ್ಜನ್ಯ ಪ್ರಕತಣಗಳಲ್ಲಿ 60 ದಿನಗಳ ಒಳಗೆ ಆರೋಪಪಟ್ಟಿ ದಾಖಲಿಸಲೇಬೇಕು. ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ನಿಮ್ಮ ದೌರ್ಬಲ್ಯ. ಹೀಗಾದರೆ ಜಾತಿ ದೌರ್ಜನ್ಯ ತಡೆಗಟ್ಟುವುದು ಸಾಧ್ಯವಿಲ್ಲ ದೇವದಾಸಿ ಪದ್ಧತಿ ನಿಷೇಧ ಆಗಿದೆ. ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಶ್ ಗೋಪಾಲಕೃಷ್ಣನ್, ಭಾರತೀಯ ವಿಜ್ಞಾನ ಸಂಸ್ಥೆ (IISc) ಮಾಜಿ ನಿರ್ದೇಶಕ ಬಲರಾಮ್ ಮತ್ತಿತರ 16 ಜನರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 71ನೇ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ನಗರದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ತಂತ್ರಜ್ಞಾನ ಕೇಂದ್ರದ ಅಧ್ಯಾಪಕರಾಗಿದ್ದ ಬೋವಿ ಸಮುದಾಯಕ್ಕೆ ಸೇರಿದ ದುರ್ಗಪ್ಪ ದೂರು ದಾಖಲಿಸಿದ್ದರು. 2014ರಲ್ಲಿ ತನ್ನನ್ನು ಹನಿ ಟ್ರ್ಯಾಪ್ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೇ ಜಾತಿ ನಿಂದಿಸಿ, ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದರು. ಗೋವಿಂದನ್ ರಂಗರಾಜನ್, ಶ್ರೀಧರ್ ವಾರಿಯರ್, ಸಂದ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಬಲರಾಮ್ ಪಿ, ಹೇಮಲತಾ ಮಹಿಷಿ, ಚಟ್ಟೋಪಾದ್ಯಾಯ ಕೆ, ಪ್ರದೀಪ್ ಡಿ ಸಾವ್ಕಾರ್, ಮತ್ತು ಮನೋಹರನ್ ಈ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.
ಮೈಸೂರಿನ ಪಾರಂಪರಿಕ ಮಹಾರಾಣಿ ಕಾಲೇಜಿನಲ್ಲಿ ಕಾಮಗಾರಿ ವೇಳೆ ಕಟ್ಟಡ ಕುಸಿದಿರುವ ಘಟನೆ ಇಂದು ನಡೆದಿದೆ. ಮಹಾರಾಣಿ ಕಾಲೇಜಿನ ಶಿಥಿಲಗೊಂಡಿದ್ದ ಕಟ್ಟಡ ದುರಸ್ತಿ ಕಾರ್ಯದ ವೇಳೆ ದುರಂತ ಸಂಭವಿಸಿದೆ. ಅವಶೇಷಗಳಡಿ ಸದ್ದಾಂ ಎಂಬ ಓರ್ವ ಕಾರ್ಮಿಕ ಸಿಲುಕಿದ್ದಾನೆ. ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದರಿಂದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಕಟ್ಟಡ ಕುಸಿದಿದೆ.
Advertisement