ಮೈಕ್ರೋಫೈನಾನ್ಸ್ ಕಿರುಕುಳ ಆರೋಪ: ನಂಜನಗೂಡಿನಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆಗೆ ಶರಣು
ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳಿಗಾಗಿ ಈಗಿರುವ ಕಾನೂನುಗಳಿಗೆ ತಿದ್ದುಪಡಿ ತರುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ, ಸಾಲಗಾರರ ಕಿರುಕುಳದಿಂದ ಗ್ರಾಮಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಗ್ರಾಮಗಳನ್ನು ತೊರೆಯುವ ಸ್ಥಿತಿ ರಾಜ್ಯದಲ್ಲಿ ಮುಂದುವರಿದಿದೆ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ವರದಿಯಾಗಿದೆ.
ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಜಯಶೀಲ (53)ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಐಐಎಫ್ಎಲ್ ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ 5 ಲಕ್ಷ ಸಾಲವನ್ನು ಜಯಶೀಲ ಪಡೆದುಕೊಂಡಿದ್ದರು. ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ ಸಾಲ ಮಾಡಿಕೊಂಡಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು.ಇದರಿಂದ ಬೇಸತ್ತು ಸಮೀಪದ ಹುಲ್ಲಹಳ್ಳಿಗೆ ತೆರಳಿ ವಿಷದ ಮಾತ್ರೆಗಳನ್ನು ತಂದು ಜಮೀನಿನಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣ ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ವರದಿಯಾಗಿದೆ. ಸಾಲ ಕಟ್ಟಲಾಗದೇ ಸಿಬ್ಬಂದಿ ಕಿರುಕುಳಕ್ಕೆ ಬೆದರಿ ಕೃಷ್ಣಮೂರ್ತಿ (33) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್‌ನ ವಿವಿಧ ಸಂಘ ಸಂಸ್ಥೆಗಳಿಂದ 4 ಲಕ್ಷ ಹಣವನ್ನು ಸಾಲ ಪಡೆದಿದ್ದರು. ಈ ನಡುವೆ ಸಾಲ ಕಟ್ಟಲಾಗದೆ ಸ್ನೇಹಿತರು ಹಾಗೂ ಸಂಬಂಧಿಕರ ನೆರವು ಕೇಳಿದ್ದರು. ಯಾರಿಂದಲೂ ನೆರವು ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.
ಎರಡು ಆತ್ಮಹತ್ಯೆ ಘಟನೆಗಳು ವರದಿಯಾದ ಬೆನ್ನಲ್ಲೇ ಹುಲ್ಲಹಳ್ಳಿ ಪೊಲೀಸರು ಧರ್ಮಸ್ಥಳ ಮಹಿಳಾ ಸ್ವ-ಸಹಾಯ ಸಂಘ ಸೇರಿದಂತೆ ಐದು ಖಾಸಗಿ ಹಣಕಾಸು ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಯುವಕನೊಬ್ಬನಿಗೆ ಪಿಸ್ತೂಲ್ ತೋರಿಸಿ, ಬೆದರಿಸಿ ಸಾಲ ಪಾವತಿಸುವಂತೆ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನನ್ನು ಪಿರಿಯಾಪಟ್ಟಣದಲ್ಲಿ ಬಂಧನಕ್ಕೊಳಪಡಿಸಲಾಗಿದೆ.
ಬೆದರಿಕೆ ಹಾಕಿದ್ದ ವಿಡಿಯೋವನ್ನು ಯುವಕ ತನ್ನ ಮೊಬೈಲ್ ಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಏತನ್ಮಧ್ಯೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಮೈಕ್ರೋ ಫೈನಾನ್ಸ್ ಹಾವಳಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.
ಸಹಾಯವಾಣಿ
ನೀವು ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದರೆ, ಅಥವಾ ಅಂತಹ ಆಲೋಚನೆಗಳಿರುವ ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ನಿಮ್ಮ ಭಾವನಾತ್ಮಕ ಬೆಂಬಲಕ್ಕಾಗಿ ಸಂಪರ್ಕಿಸಿ ಸ್ನೇಹ ಫೌಂಡೇಶನ್ - 04424640050, ಟೆಲಿ ಮಾನಸ್ - 14416 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 02225521111 ಗೆ ಕರೆ ಮಾಡಿ, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರುತ್ತದೆ.