
ಬೆಳಗಾವಿ: ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಬಿಮ್ಸ್) ಆಸ್ಪತ್ರೆಯಲ್ಲಿ ಮಂಗಳವಾರ ಮತ್ತೋರ್ವ ಬಾಣಂತರಿ ಸಾವು ವರದಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈ ನಡುವೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಕುರಿತು ಜನರಲ್ಲಿ ಆತಂಕ ಕೂಡ ಹೆಚ್ಚಾಗತೊಡಗಿದೆ.
ಸೋಮವಾರ ಸಂಜೆ ಹೆರಿಗೆ ನೋವಿನಿಂದಾಗಿ 31 ವರ್ಷದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಸಿಸೇರಿಯನ್ ನಡೆಸಲಾಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಬೆಳಗಾವಿ ತಾಲೂಕಿನ ನೀಲಜಿ ಗ್ರಾಮದ ನಿವಾಸಿ ಅಂಜಲಿ ನಿಂಗಾನಿ ಪಾಟೀಲ್ ಎಂದು ಗುರುತಿಸಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಅಂಜಲಿ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಅಲತಗಾ ಗ್ರಾಮದವರಾದ ಅಂಜಲಿ 12 ವರ್ಷಗಳ ಹಿಂದೆ ನೀಲಜಿಯ ನಿಂಗಾಣಿ ಪಾಟೀಲ್ ಎಂಬುವವರನ್ನು ವಿವಾಹವಾಗಿದ್ದರು. 12 ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಪಡೆದ ಸಂತಸದಲ್ಲಿ ದಂಪತಿಗಳಿದ್ದರು.
ಅಂಜಲಿ ಪಾಟೀಲ್ ಅವರ ಸಂಬಂಧಿ ರಾಹುಲ್ ಮಾತನಾಡಿ, 'ಅಂಜಲಿ ಆರೋಗ್ಯವಾಗಿದ್ದರು. ಕಾಲ್ನಡಿಗೆಯ ಮೂಲಕ ಸೋಮವಾರ ಆಸ್ಪತ್ರೆಗೆ ಬಂದಿದ್ದರು. ಸೋಮವಾರವೇ ಹೆರಿಗೆ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದಾಗ, ಮತ್ತೆ ಗಂಡನ ಮನೆಗೆ ಮರಳಿದ್ದರು. ಈ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಜೆ ಮತ್ತೆ ಆಸ್ಪತ್ರೆ ಬಂದಾಗ, ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಆಕೆಯ ಪತಿಗೆ ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಹೇಳಿದ್ದರು. 12 ಗಂಟೆ ವೇಳೆಗೆ ನಮ್ಮ ಬಳಿಗೆ ಬಂದ ಆಸ್ಪತ್ರೆಯ ಸಿಬ್ಬಂದಿ ಅಂಜಲಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದರು.
ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಉತ್ತಮ ಚಿಕಿತ್ಸೆ ಕೊಡಿಸಲು ನಿರ್ಧರಿಸಿದಾಗ ಸಿಬ್ಬಂದಿ ಆಕೆಯನ್ನು ಡಿಸ್ಚಾರ್ಜ್ ಮಾಡಲು ಬಿಡಲಿಲ್ಲ. ಮುಂಜಾನೆ 4 ಗಂಟೆಗೆ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ವೈದ್ಯರ ನಿರ್ಲಕ್ಷ್ಯದಿಂದ ಆಕೆ ಸಾವನ್ನಪ್ಪಿದ್ದಾಳೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೆರಿಗೆ ವಾರ್ಡ್ ಮತ್ತು ಶವಾಗಾರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಿಮ್ಸ್ ನಿರ್ದೇಶಕ ಡಾ. ಅಶೋಕ್‌ಕುಮಾರ್ ಶೆಟ್ಟಿ ಅವರು ಆರೋಪವನ್ನು ನಿರಾಕರಿಸಿದ್ದಾರೆ.
ಮಹಿಳೆ ಮೃತಪಟ್ಟಿರುವುದು ವೈದ್ಯರ ನಿರ್ಲಕ್ಷ್ಯದಿಂದಲ್ಲ, ಆದರೆ ಆಮ್ನಿಯೋಟಿಕ್ ಫ್ಲೂಯಿಡ್ ಎಂಬಾಲಿಸಮ್ (ಎಎಫ್‌ಇ) (ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯಾದ ಸ್ವಲ್ಪ ಸಮಯದ ನಂತರ ಸಂಭವಿಸಬಹುದಾದ ಅಪರೂಪದ ಜೀವಕ್ಕೆ ಅಪಾಯವೊಡ್ಡುವ ಸಮಸ್ಯೆ)ನಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದರು.
ಅಂಜಲಿಯನ್ನು ಬಿಮ್ಸ್'ಗೆ ದಾಖಲಿಸಿದಾಗ 40 ವಾರಗಳ ಗರ್ಭಿಣಿಯಾಗಿದ್ದರು, ನಮ್ಮ ಸ್ತ್ರೀರೋಗತಜ್ಞರು ಅವರನ್ನು ಪರೀಕ್ಷಿಸಿದಾಗ ಹೈ ರಿಸ್ಕ್ ಕೇಸ್ ಎಂದು ಕಂಡುಕೊಂಡಿದ್ದರು.. ತಕ್ಷಣವೇ ಸಿ-ಸೆಕ್ಷನ್ ಮಾಡಲು ಆಪರೇಷನ್ ಥಿಯೇಟರ್‌ಗೆ ಕರೆದೊಯ್ದರು. ಆದರೆ, ಅಂಜಲಿ ಫಿಟ್ಸ್‌ನಿಂದ ಬಳಲುತ್ತಿದ್ದರು. ಅವರ ರಕ್ತದೊತ್ತಡ ಕಡಿಮೆಯಾಯಿತು, ಆಮ್ನಿಯೋಟಿಕ್ ಫ್ಲೂಯಿಡ್ ವಾಸನೆ ಬರುತ್ತಿರುವುದು ಕಂಡು ಬಂದಿದ್ದು, ಈ ವೇಳೆ ಅಂಜಲಿ ಎಎಫ್‌ಇಯಿಂದ ಬಳಲುತ್ತಿದ್ದರು ಎಂಬುದು ತಿಳಿದುಬಂದಿದೆ. ಬಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಪ್ರತಿ ವರ್ಷ ಹೆರಿಗೆಗಳು ನಡೆಯುತ್ತವೆ, ಇದರಲ್ಲಿ ಶೇ.40ರಷ್ಟು ಸಿಸೇರಿಯನ್ ಆಗಿರುತ್ತದೆ,
ಸಾಮಾನ್ಯವಾಗಿ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ (PHC) ಹೆಚ್ಚಿನ ಅಪಾಯದ ರೋಗಿಗಳು ಬರುತ್ತಾರೆ, ರೋಗಿಯನ್ನು ಉಳಿಸುವುದು ಕಷ್ಟ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಬಿಮ್ಸ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ್ ಭೇಟಿ ನೀಡಿ ಅಂಜಲಿ ಪಾಟೀಲ್ ಅವರ ಬಗ್ಗೆ ಮಾಹಿತಿ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಆಸ್ಪತ್ರೆಯ ಶವಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಶವಪರೀಕ್ಷೆ ನಡೆಸಿ ಸಂಬಂಧಪಟ್ಟ ವೈದ್ಯರು ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಠಾಣೆಯ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದೆ.
Advertisement