ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ, 60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ ದೌರ್ಜನ್ಯ ಪ್ರಕರಣಗಳಲ್ಲಿನ ಶಿಕ್ಷೆ ಪ್ರಮಾಣ 2020ರಲ್ಲಿ ಶೇ 10ರಷ್ಟು ಇತ್ತು. ಈಗ ಅದು ಶೇ 7ಕ್ಕೆ ಇಳಿದಿದೆ. ಆ ಪ್ರಮಾಣ ಶೇ 10ಕ್ಕೆ ಮುಟ್ಟಬೇಕು. ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣದ ಬಗ್ಗೆ ಸರ್ಕಾರಿ ಅಭಿಯೋಜಕರು ಮತ್ತು ಪೊಲೀಸ್ ಇಲಾಖೆಯವರು ಪರಿಶೀಲನಾ ಸಭೆ ನಡೆಸಬೇಕು. ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ತಪ್ಪದೇ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಸಬೇಕು. ಯಾರಾದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ತಡೆಯಾಜ್ಞೆ ತೆರವುಗೊಳಿಸಬೇಕು. ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ದಶಗಳಿಂದ ಶೇ.3ಕ್ಕಿಂತ ಹೆಚ್ಚಾಗಿಲ್ಲ. ಈ ಕಾರಣಕ್ಕೆ ಡಿಸಿಆರ್"ಇ ಸೆಲ್ ಗಳಿಗ ಪೊಲೀಸ್ ಠಾಣೆಯ ಶಕ್ತಿ ನೀಡಲಾಗಿದೆ. ಇನ್ನೂ ಶಿಕ್ಷಣ ಪ್ರಮಾಣ ಹೆಚ್ಚಾಗದಿದ್ದರೆ ಹೇಗೆ? ಪ್ರಕರಣಗಳ ತನಿಖೆಗೆ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು.
ಪರಿಶಿಷ್ಟ ಸಮುದಾಯದ ಜನರ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ ತಡ ಆದಷ್ಟೂ, ನ್ಯಾಯಾಲಯಗಳಲ್ಲಿ ವಿಚಾರಣೆ ತಡವಾಗಿ ಸಾಕ್ಷಿ ನಾಶ ಆಗುತ್ತದೆ. ಈ ಪ್ರಕರಣಗಳಲ್ಲಿ BURDEN OF PROOF ಆರೋಪಿಗಳ ಮೇಲಿರುತ್ತದೆ. ಆದ್ದರಿಂದ ಶಿಕ್ಷೆ ಪ್ರಮಾಣ ಹೆಚ್ಚಾಗಲೇಬೇಕು. ಆರೋಪ ಪಟ್ಟಿ ಶೀಘ್ರವಾಗಿ ಸಲ್ಲಿಸಿ ಸಾಕ್ಷ್ಯಗಳನ್ನು ಪರಿಣಾಮಕಾರಿಯಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಸೂಚನೆಗಳು ಇಂತಿವೆ...
ಪೋಕ್ಸೋ ಪ್ರಕರಣಗಳು ನ್ಯಾಯಾಲಯಗಳಲ್ಲಿ ದೀರ್ಘ ಕಾಲದಿಂದ ಬಾಕಿ ಇದ್ದರೆ ಸಂಬಂಧಿತ ಅಧಿಕಾರಿಗಳು ಪ್ರಾಸಿಕ್ಯೂಷನ್ ಜೊತೆ ಚರ್ಚಿಸಿ ಬೇಗ ಇತ್ಯರ್ಥ ಪಡಿಸಿ, ಶೀಘ್ರ್ರ ನ್ಯಾಯದಾನಕ್ಕೆ ಕ್ರಮ ವಹಿಸಬೇಕು. ಅಟ್ರಾಸಿಟಿ ಪ್ರಕರಣಗಳಲ್ಲಿ ಸರ್ಕಾರಿ ಪ್ರಾಸಿಕ್ಯೂಟರ್‌ಗಳು ಸರಿಯಾಗಿ ವಾದಿಸಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಬೇಕು. ದೌರ್ಜನ್ಯ ಮಾಡಿದವರು ಸುಲಭವಾಗಿ ಜಾಮೀನು ಪಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿಯನ್ನು ನಿಗದಿತ ಅವಧಿಯ ಒಳಗಾಗಿ ಸಲ್ಲಿಸಬೇಕು.
ಅರಣ್ಯ ಹಕ್ಕು ಸಮಿತಿ ನಿಗದಿತವಾಗಿ ಸಭೆಗಳನ್ನು ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು. 3,430 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲು ಇನ್ನೂ ಬಾಕಿಯಿದ್ದು, ಇದನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಹಕ್ಕುಪತ್ರ ನೀಡಿದ ಬಳಿಕ ಪಹಣಿಯಲ್ಲಿ ಅವರ ಹೆಸರು ನಮೂದಿಸುವ ಕಾರ್ಯ ತ್ವರಿತಗೊಳಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು.
ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. 60 ದಿನಗಳ ಒಳಗಾಗಿ ಆರೋಪಪಟ್ಟಿ ದಾಖಲಿಸಬೇಕು. ಇನ್ನೂ 665 ಪ್ರಕರಣಗಳು ತನಿಖೆಗೆ ಬಾಕಿಯಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನ್ಯಾಯಾಲಯಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಬೇಕು. ಪ್ರಾಸಿಕ್ಯೂಶನ್ ಸಹ ಪರಿಶೀಲನೆ ನಡೆಸಬೇಕು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಈ ಸಭೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗುವುದು. ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಅಂತಹ ಪ್ರಮಾಣ ಪತ್ರ ನೀಡುವ ಅಧಿಕಾರಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುತ್ತದೆ. ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು.