
ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡದ ಮೇಲ್ಛಾವಣಿ ಕುಸಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿ ಸಿಲುಕಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಮೃತ ಕಾರ್ಮಿಕನನ್ನು ಮೈಸೂರಿನ ಗೌಸಿಯಾ ನಗರದ ನಿವಾಸಿ ಮೊಹಮ್ಮದ್ ಸದ್ದಾಂ (32) ಎಂದು ಗುರ್ತಿಸಲಾಗಿದೆ. ಮಹಾರಾಣಿ ಕಾಲೇಜು ಕಟ್ಟಡ 80 ವರ್ಷಗಳ ಹಳೆಯದಾಗಿದ್ದು, ಕಳೆದ ತಿಂಗಳು ದುರಸ್ಥಿ ಕಾರ್ಯ ಆರಂಭವಾಗಿತ್ತು. ಮಂಗಳವಾರ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿದಿದ್ದು, ಕಾರ್ಮಿಕರೊಬ್ಬರು ಅವಶೇಷಗಳಡಿ ಸಿಲುಕಿಕೊಂಡಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಮಾಗಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕಟ್ಟಡದಲ್ಲಿ 15 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದೆವು. ಸಂಜೆ 5 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ, ಚಹಾ ಕುಡಿಯುತ್ತಿದ್ದೆವು. ಸದ್ದಾಂ ಬಟ್ಟೆಗಳನ್ನು ತೆಗೆದುಕೊಳ್ಳಲು ಮೊದಲ ಮಹಡಿಗೆ ಹೋಗಿದ್ದರು. ಈ ವೇಳೆ ಕಟ್ಟಡದ ಮೇಲ್ಚಾವಣಿ ಹಠಾತ್ತನೆ ಕುಸಿದುಬಿದ್ದಿದೆ. ಕೂಡಲೇ ನಾವೆಲ್ಲರೂ ಮೊದಲ ಮಹಡಿಗೆ ಹೋಗಿದ್ದೆವು. ಆದರೆ, ಸದ್ದಾಂ ಪತ್ತೆಯಾಗಲಿಲ್ಲ. ಕೂಗಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಸದ್ದಾಂ ಜೊತೆ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಆರಿಫ್ ಎಂಬುವವರು ಹೇಳಿದ್ದಾರೆ.
ಘಟನೆ ಬಳಿಕ ಶಾಸಕ ಕೆ.ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಹರೀಶ್ ಗೌಡ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ‘ಕಳೆದ ನಾಲ್ಕು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರು ವಿಜ್ಞಾನ ಪ್ರಯೋಗಾಲಯದ ಉಪಕರಣಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಕೆಡವುವ ಸಿದ್ಧತೆಯಲ್ಲಿ ನಿರತರಾಗಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಸ್ಟಾರ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ನೀಡಲಾಗಿದ್ದು, ವರ್ಕ್ ಆರ್ಡರ್ ಮಂಜೂರಾಗಿದೆ, ಇದು ಪಾರಂಪರಿಕ ಕಟ್ಟಡವಾಗಿದ್ದು, ಕಟ್ಟಡದ ಮುಂಭಾಗವನ್ನು ಉಳಿಸಿಕೊಳ್ಳಬೇಕಾಗಿದೆ. ಪಾರಂಪರಿಕ ಸಮಿತಿಯ ತಜ್ಞರ ನಿರ್ದೇಶನದಂತೆ ಸಂಪೂರ್ಣ ಕಟ್ಟಡವನ್ನು ಕೆಡವಿ, ಮೂಲ ವಿನ್ಯಾಸದ ಪ್ರಕಾರ ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ, ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದೆ. ಶಿಥಿಲಗೊಂಡ ಕಟ್ಟಡವನ್ನು ಕೆಡವಲು ಕೈಗೆತ್ತಿಕೊಳ್ಳಲಾಗಿದೆ. 14 ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಒಬ್ಬರು ಅವಶೇಷಗಳಡಿ ಸಿಲುಕಿದ್ದಾರೆ. ಕಳೆದ ವಾರದಿಂದ ಕಾಮಗಾರಿ ನಡೆಸಲಾಗುತ್ತಿದೆ. ಎಂಸಿಸಿ ಮತ್ತು ಪೊಲೀಸರೊಂದಿಗೆ ಅಗ್ನಿಶಾಮಕ ದಳವು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಕಾರ್ಮಿಕರನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಂತರ ಕುಸಿತಕ್ಕೆ ಕಾರಣವಾದ ಲೋಪವನ್ನು ತನಿಖೆ ಮಾಡುತ್ತೇವೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.
ಬಿಜೆಪಿ ಎಂಎಲ್ಸಿ ಕೆ ವಿವೇಕಾನಂದ ಮಾತನಾಡಿ, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಾಗ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಂಡಿಲ್ಲ. ಬಾಗಿಲು ತೆಗೆದು, ಕಿಟಿಕಿ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ದುರಂತಕ್ಕೆ ಗುತ್ತಿಗೆದಾರರೇ ಹೊಣೆಯಾಗಿದ್ದಾರೆಂದು ಹೇಳಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಮೈಸೂರು ಜಿಲ್ಲಾ ಪರಂಪರೆ ಸಮಿತಿ ಸದಸ್ಯ ಎನ್ ಎಸ್ ರಂಗರಾಜ್ ಹೇಳಿದ್ದಾರೆ.
ಇದು ಪಾರಂಪರಿಕ ಕಟ್ಟಡವಾಗಿದ್ದು, ಕೆಡವುವ ಮುನ್ನ ಮುನ್ನೆಚ್ಚರಿಕೆ ವಹಿಸಿರಬೇಕು. ಅತ್ಯಂತ ಬೆಲೆಬಾಳುವ ಕಿಟಕಿ, ಬಾಗಿಲುಗಳನ್ನು ಹೊರಗಿನಿಂದ ತೆಗೆದಿರಬೇಕು. ಇದಕ್ಕೆ ಇಂತಹ ಕೆಲಸಗಳಲ್ಲಿ ಪರಿಣಿತಿ ಹೊಂದಿರುವ ಕೆಲಸಗಾರರ ಅಗತ್ಯವಿದೆ ಎಂದರು.
ನವೆಂಬರ್ 2022 ರಲ್ಲಿಯೂ ಮಹಾರಾಣಿ ಕಾಲೇಜಿನ ಒಂದು ಭಾಗವು ಕುಸಿದು ಬಿದ್ದಿದ್ದು. ಅದೃಷ್ಟವಶಾತ್ ಯಾವುದೇ ಯಾವುದೇ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿರಲಿಲ್ಲ. ಬಳಿಕ ಶಿಥಿಲಾವಸ್ಥೆಯಲ್ಲಿದ್ದ ಸಂಪೂರ್ಣ ಕಟ್ಟಡವನ್ನು ತೆರವುಗೊಳಿಸಿ ಪಕ್ಕದ ಕಟ್ಟಡದಲ್ಲಿ ತರಗತಿ ನಡೆಸಲಾಯಿತು..
Advertisement