
ಬೆಂಗಳೂರು: ಬುಧವಾರ ರಾತ್ರಿ 15 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಳನ್ನು ಗಿರಿನಗರದ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಭೂಮಿಕಾ ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಭೂಮಿಕಾಳ ಪೋಷಕರು ಅವಳನ್ನು ಎಬ್ಬಿಸಲು ಬಾಗಿಲು ತಟ್ಟಿದರು ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಕಿಟಕಿಯ ಮೂಲಕ ನೋಡಿದಾಗ ಅವಳು ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಪೂರ್ವಸಿದ್ಧತಾ ಪರೀಕ್ಷೆಗಳಿಗೆ ಓದದಿದ್ದಕ್ಕಾಗಿ ಆಕೆಯ ಪೋಷಕರು ಗದರಿಸಿದ್ದರಿಂದ ಬುಧವಾರ ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರಿಗೆ ಯಾವುದೇ ಡೆತ್ ನೋಟ್ ಸಿಗಲಿಲ್ಲ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ.
ಏತನ್ಮಧ್ಯೆ, 38 ವರ್ಷದ ಉದ್ಯಮಿಯೊಬ್ಬರು ಹಣ ನೀಡಿದ್ದ ತನ್ನ ಸ್ನೇಹಿತನ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕಾಶ್ ನಗರದಲ್ಲಿರುವ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.
ಮೃತನನ್ನು ಲೇತ್ ನಡೆಸುತ್ತಿದ್ದ ಅರುಣ್ ಎಂದು ಗುರುತಿಸಲಾಗಿದೆ. ಪೊಲೀಸರು ಹೇಳುವಂತೆ ಅರುಣ್ ತನ್ನ ಸ್ನೇಹಿತ ದಿನೇಶ್ ನಿಂದ 6 ಲಕ್ಷ ರೂಪಾಯಿ ಸಾಲ ಪಡೆದು, ಒಂದು ವಾರದೊಳಗೆ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದ. ಆದರೆ ಅರುಣ್ ಕೇವಲ 1.5 ಲಕ್ಷ ರೂಪಾಯಿ ಮಾತ್ರ ಹಿಂದಿರುಗಿಸಿದ್ದ.
ಅರುಣ್ ತಂದೆ ನೀಡಿದ ದೂರಿನ ಪ್ರಕಾರ, ದಿನೇಶ್ ಅರುಣ್ ಗೆ ಬೆದರಿಕೆ ಹಾಕಿದ್ದಾನೆ, ಇದರಿಂದಾಗಿ ಆತ ಆತ್ಮಹತ್ಯೆಗೆ ಶರಣವಾಗಿರಬಹುದು ಎಂದು ಆರೋಪಿಸಲಾಗಿದೆ. ಪೊಲೀಸರು ದಿನೇಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.
Advertisement