
ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ್ದ ಹಿನ್ನೆಲೆಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ ಇಬ್ಬರು ಅಧಿಕಾರಿಗಳ ವಿರುದ್ಧ ಮತ್ತು ಚಿತ್ರದುರ್ಗ, ರಾಯಚೂರು ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬ ಅಧಿಕಾರಿಗಳ ವಿರುದ್ಧ ದಾಳಿ ನಡೆಸಿರುವ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ದಕ್ಷಿಣದಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಸಂಜಯ್ ಮಾಂದೇಡ್, ಚಿತ್ರದುರ್ಗದ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ವ್ಯವಸ್ಥಾಪಕ ಶಶಿಧರ್, ಬಾಗಲಕೋಟೆಯ ಹೊಳಗೇರಿ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಹಿರೇಮಠ್ ಈ ಅಧಿಕಾರಿಗಳಲ್ಲಿ ಸೇರಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆಯ ಹೆಬ್ಬಾಳ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಾಧವ ರಾವ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಉಪ ಕಾರ್ಯದರ್ಶಿ ಟಿ ಕೆ ರಮೇಶ್, ರಾಯಚೂರು ಜಿಲ್ಲಾ ಪಂಚಾಯತ್ ಸಹಾಯಕ ಲೆಕ್ಕಪತ್ರ ಅಧಿಕಾರಿ ನರಸಿಂಗ ರಾವ್ ಗುಜ್ಜರ್ ಮತ್ತು ಪಶುಸಂಗೋಪನಾ ಇಲಾಖೆಯ ಮೇಲ್ವಿಚಾರಕ ಸಂಜಯ್ ಅಣ್ಣಪ್ಪ ದುರ್ಗಣ್ಣವರ್ ಇತರ ಅಧಿಕಾರಿಗಳಾಗಿದ್ದಾರೆ.
ಬೆಳಿಗ್ಗೆ ಏಕಕಾಲದಲ್ಲಿ ದಾಳಿಗಳು ಪ್ರಾರಂಭವಾದವು ಮತ್ತು ಸಂಜೆಯವರೆಗೆ ಮುಂದುವರಿಯಲಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
Advertisement