
ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಮತ್ತೆ ಸುದ್ದಿಗೆ ಬಂದಿದ್ದು, ಕೊಲೆ ಆರೋಪಿ ಫಯಾಜ್ ನನ್ನು ಕಾಲೇಜಿನಿಂದ ಅಮಾನತು ಮಾಡದೇ ಇರುವ ವಿಚಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆರೋಪಿಯನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.
ಹೌದು.. ಕಳೆದ ಏಪ್ರಿಲ್ 18ರಂದು ಕಾಲೇಜು ಆವರಣದಲ್ಲೇ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಆರೋಪಿ ಫಯಾಜ್ ನನ್ನು ಕಾಲೇಜಿನಿಂದ ಅಮಾನತು ಮಾಡದ ವಿಚಾರ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಈ ಸಂಬಂಧ ಶ್ರೀರಾಮ ಸೇನೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಸ್ವತಃ ನೇಹಾ ಹಿರೇಮಠ ಓದುತ್ತಿದ್ದ ಪಿ.ಸಿ. ಜಬೀನ್ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದ್ದರು. ಕೊಲೆ ಮಾಡಿದ ಆರೋಪಿ ಫಯಾಜ್ ನನ್ನು ಈವರೆಗೂ ಏಕೆ ಅಮಾನತ್ತು ಮಾಡಿಲ್ಲವೆಂದು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಲೇಜು ಆಡಳಿತ ಮಂಡಳಿ ಆರೋಪಿ ಫಯಾಜ್ ನನ್ನು ಅಮಾನತು ಮಾಡಿದೆ. ಮಾತ್ರವಲ್ಲದೇ ಆತನಿಗೆ ಪರೀಕ್ಷೆಗೂ ಅವಕಾಶ ಕೊಡದಿರಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಪಿಸಿ ಜಾಬಿನ್ ಕಾಲೇಜ್ ಪ್ರಾಂಶುಪಾಲ ಎಲ್.ಡಿ ಹೊರಕೇರಿ, 'ಫಯಾಜ್ 2022 ರಲ್ಲಿ ಬಿಸಿಎ ವ್ಯಾಸಂಗ ಮಾಡುತಿದ್ದ. ಐದು ಮತ್ತು ಆರನೇ ಸೆಮಿಸ್ಟರ್ನಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಆಗಿದ್ದ. ಇದೀಗ ಆತನಿಗೆ ನಾವು ಆತ ಕಾಲೇಜಿಗೆ ಬರಲು ಅನುಮತಿ ಕೊಡುವುದಿಲ್ಲ. ನಾವು ಪರಿಪೂರ್ಣವಾಗಿ ಆತನನ್ನು ಅಮಾನತು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹ
ಇನ್ನು ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿವೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಸಂಬಂದ ಹೋರಾಟ ಆರಂಭಿಸಿದ್ದರು. ಅಲ್ಲದೆ ನೇಹಾ ಕೊಲೆಯಲ್ಲಿ ಪ್ರಭಾವಿ ಶಾಸಕನ ಕೈವಾಡ ಇದೆ ಎಂದು ಅವರು ಆರೋಪಿಸಿದ್ದಾರೆ.
Advertisement