
ಹಾಸನ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 21 ಜನರು ಹೃದಯಾಘಾತದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿದ್ದಾರೆ. ಈ ಸಂಬಂಧ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ತಜ್ಞರ ತಂಡವು ತನಿಖೆ ನಡೆಸಿ ಶೀಘ್ರದಲ್ಲೇ ವರದಿ ಸಲ್ಲಿಸಲಿದೆ. ಇದರಲ್ಲಿ ಹೃದಯಾಘಾತಕ್ಕೆ ಕಾರಣಗಳನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದ್ದಾರೆ.
ಸೋಮವಾರ ಹೃದಯಾಘಾತದಿಂದ ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ಇತ್ತೀಚಿಗೆ ಹೃದಯಾಘಾತಕ್ಕೆ ಬಲಿಯಾದವರಲ್ಲಿ ಬಹುತೇಕ ಎಲ್ಲರೂ 30 ರಿಂದ 55 ವರ್ಷ ವಯಸ್ಸಿನವರು. ಬಹು ಕಾಯಿಲೆಗಳಿಂದ ಸಾವು ಸಂಭವಿಸಿರಬಹುದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್ ಹೇಳಿದ್ದಾರೆ.
TNIEಗೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಮೂರು ವರ್ಷಗಳ ಹಿಂದೆ 68 ತಾಲೂಕು ಆಸ್ಪತ್ರೆಗಳಲ್ಲಿ ಪರಿಚಯಿಸಲಾದ ST-ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (STEMI) ಯೋಜನೆಯಡಿ 37,774 ಜನರು ಚಿಕಿತ್ಸೆ ಪಡೆದಿದ್ದಾರೆ.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್), ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲೂಕು ಆಸ್ಪತ್ರೆ ಈ ಯೋಜನೆಯ ಭಾಗವಾಗಿದೆ. ಇದರಡಿ ತಾಲೂಕು ಆಸ್ಪತ್ರೆಗಳಲ್ಲಿನ ರೋಗಿಗಳನ್ನುತಪಾಸಣೆ ನಡೆಸುವ ವೈದ್ಯರು ಮತ್ತು ಹೃದ್ರೋಗ ತಜ್ಞರು, ಟೆಲಿಮೆಡಿಸಿನ್ ಮೂಲಕ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ತಜ್ಞ ವೈದ್ಯರೊಂದಿಗೆ ಸಂವಾದ ನಡೆಸುತ್ತಾರೆ. ‘ಗೋಲ್ಡನ್ ಅವರ್’ ಸಮಯದಲ್ಲಿ ರೋಗಿಗಳು ಸಮೀಪದ ತಾಲ್ಲೂಕು ಆಸ್ಪತ್ರೆ ಸಂಪರ್ಕಿಸಿದರೆ ಅವರನ್ನು ಉಳಿಸುವಲ್ಲಿ ಈ ಯೋಜನೆ ನೆರವಾಗಿದೆ.
Advertisement