
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸ್ಥಳೀಯರೇ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಮಂಗಳವಾರ ವರದಿಯಾಗಿದೆ.
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಕೆರೇನಹಳ್ಳಿ ಗ್ರಾಮದಲ್ಲಿ ರೈತರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಈ ಹಿಂದೆ ಇದೇ ಗ್ರಾಮದ ರೈತ ಕೃಷ್ಣಪ್ಪ ಸೇರಿದಂತೆ ಹಲವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಕೆರೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರೇ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಿರತೆ ಗ್ರಾಮದ ಬಳಿ ಪತ್ತೆಯಾಗುತ್ತಲೇ ಎಚ್ಚೆತ್ತ ಗ್ರಾಮಸ್ಥರು ಗುಂಪುಗೂಡಿ ದೊಣ್ಣೆ, ಬಲೆಗಳನ್ನು ಹಿಡಿದು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಮಂಗಳವಾರ ಮಧ್ಯಾಹ್ನ ಕೃಷ್ಣಪ್ಪ ಗ್ರಾಮದ ಸಮೀಪ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅವರ ಮೇಲೆ ಚಿರತೆ ದಾಳಿ ಮಾಡಿದೆ.
ಅವರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ವಿಷಯ ತಿಳಿದು ಕೆರೇನಹಳ್ಳಿ, ವರ್ಲಕೊಂಡ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ದೊಣ್ಣೆ, ಬಲೆ ಹಿಡಿದು ಸ್ಥಳಕ್ಕೆ ಬಂದರು. ಪೊದೆಗಳ ನಡುವೆ ಅಡಗಿದ್ದ ಚಿರತೆ ಸೆರೆ ಹಿಡಿದರು.
ರೈತ ಪ್ರಾಣಾಪಾಯದಿಂದ ಪಾರು
ಇನ್ನು ತಾಲೂಕಿನ ವರ್ಲಕೊಂಡ ಗ್ರಾಮದ ವರಹಗಿರಿ ಬೆಟ್ಟದ ಮೇಲಿರುವ ಚಿರತೆ ಕೇರೇನಹಳ್ಳಿ ಗ್ರಾಮದ ರೈತನ ಮೇಲೆ ಚಿರತೆ ದಾಳಿ ಮಾಡಿತ್ತು. ರೈತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜು.1ರ ಮಂಗಳವಾರ ನಡೆದಿದೆ. ಕೆರೇನಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಎಂಬವರು ಚಿರತೆ ದಾಳಿಗೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಇತ್ತೀಚೆಗೆ ವರಹಗಿರಿ ಬೆಟ್ಟದ ಮೇಲೆ ರಾಜಾರೋಷವಾಗಿ ಓಡಾಡಿಕೊಂಡು, ಬಂಡೆಯ ಮೇಲೆ ವಿಶ್ರಾಂತಿ ಪಡೆಯುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಾರ್ವಜನಿಕ ವಲಯದಲ್ಲಿ ಭಯದ ಭೀತಿ ಹುಟ್ಟಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಕೂಡಾ ಅಳವಡಿಸಿದ್ದರು. ಆದರೆ ಇದೀಗ ಚಿರತೆಯನ್ನು ಗ್ರಾಮಸ್ಥರೇ ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಇನ್ನು ವರ್ಲಕೊಂಡ ಬೆಟ್ಟದ ಸಮೀಪ ಸುಮಾರು ವರ್ಷಗಳಿಂದ ಚಿರತೆಗಳು ಕಾಣಿಸಿಕೊಂಡು ಸಾರ್ವಜನಿಕರಿಗೆ, ರೈತರಿಗೆ ತೊಂದರೆ ಕೊಡುತ್ತಿದ್ದರೂ, ಅರಣ್ಯ ಇಲಾಖೆ ಕೇವಲ ಬೋನ್ ಅಳವಡಿಸಿ, ಸುಮ್ಮನಾಗಿ, ಅದನ್ನು ಸೆರೆ ಹಿಡಿಯಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದರು.
Advertisement