
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳಿಗೆ ಕೋವಿಡ್-19 ಲಸಿಕೆಗಳ ಸಂಬಂಧ ಕಲ್ಪಿಸುವ ಮೂಲಕ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. 'ಭಿನ್ನಮತೀಯ' ಚಟುವಟಿಕೆಗಳಿಗೆ ಯಾವುದೇ ಲಸಿಕೆ ಇಲ್ಲ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಶುಕ್ರವಾರ ದೂರಿದ್ದಾರೆ.
'ಕೋವಿಡ್ ಲಸಿಕೆಗೆ ಆತುರಾತುರದಲ್ಲಿ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಹೃದಯಾಘಾತ ಪ್ರಕರಣಗಳಿಗೆ ಕಾರಣ ಇರಬಹುದು ಎಂಬುದನ್ನು ಅಲ್ಲಗಳೆಯಲಾಗದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
'ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲಿ 20ಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸರಣಿ ಸಾವುಗಳಿಗೆ ನಿಖರ ಕಾರಣ ಪತ್ತೆ ಹಚ್ಚಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, ಅಧ್ಯಯನ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ' ಎಂದರು.
ಮುಂದುವರಿದು, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ ಎಂಬುದನ್ನು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಫೆಬ್ರುವರಿಯಲ್ಲಿಯೇ ಆದೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ' ಎಂದಿದ್ದಾರೆ.
'ಸುಳ್ಳುಸುದ್ದಿ ಪ್ರಚಾರ ಮತ್ತು ಪ್ರಸಾರದ ವಿರುದ್ಧ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ಸೇರಿದಂತೆ ಕಠಿಣ ಶಾಸನ ತರುವ ಬಗ್ಗೆ ಕರ್ನಾಟಕ ಸರ್ಕಾರ ಮಾತನಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಿರುವ ಭರವನ್ನು ನೋಡಿದರೆ, ಕೋವಿಡ್ ಲಸಿಕೆಗಳ ಕುರಿತು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಮೊದಲು ಅವರ ವಿರುದ್ಧ ಯಾರಾದರೂ ದೂರು ದಾಖಲಿಸಬಹುದು ಎಂದು ಅನ್ನಿಸುತ್ತಿದೆ' ಎಂದು ಲಹರ್ ಸಿಂಗ್ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಕೇಂದ್ರ ಸರ್ಕಾರ ಈಗಾಗಲೇ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೂ, ಸಾಂಕ್ರಾಮಿಕದ ಸಂದರ್ಭದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿದ ನಮ್ಮ ವೈಜ್ಞಾನಿಕ ಸಮುದಾಯದ ಸ್ಥೈರ್ಯವನ್ನು ಕ್ಷೀಣಗೊಳಿಸುವುದರ ಕಡೆಗೆಯೇ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್‌ನಲ್ಲಿ ಯಾರಾದರೂ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಬಹುಶಃ ಅವರಿಗೆ ಎಚ್ಚರಿಕೆ ನೀಡಲು ಆ ಪಕ್ಷದಲ್ಲಿ ಯಾರೂ ಸಿದ್ದರಿಲ್ಲ, ಏಕೆಂದರೆ ಅವರ ಹೈಕಮಾಂಡ್ ಮಟ್ಟದಲ್ಲಾಗಲಿ, ಸ್ಥಳೀಯ ಮಟ್ಟದಲ್ಲಾಗಲಿ ಯಾರೂ ಕೂಡ ಅವರ ಸರ್ಕಾರ ದೀರ್ಘಕಾಲ ಉಳಿಯುತ್ತದೆ ಎಂದು ಭಾವಿಸುತ್ತಿಲ್ಲ. ಅದೂ ಅಲ್ಲದೆ ಭಿನ್ನಮತೀಯ ಚಟುವಟಿಕೆಗಳ ವಿರುದ್ಧ ಯಾವುದೇ ಲಸಿಕೆಯೂ ಇಲ್ಲ'. ಎಂದಿದ್ದಾರೆ.
Advertisement