
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು ಜುಲೈ 8 ರಂದು ಬಂದ್ ಗೆ ಕರೆ ನೀಡಿದ್ದಾರೆ.
ನೌಕರರ ಮುಷ್ಕರದಿಂದಾಗಿ ಮಂಗಳವಾರ ರಾಜ್ಯದ 10 ಮಹಾನಗರ ಪಾಲಿಕೆಗಳು ಸಂಪೂರ್ಣ ಬಂದ್ ಆಗಲಿದ್ದು, ಪಾಲಿಕೆಗಳ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಬಿಬಿಎಂಪಿ, ಹುಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ತುಮಕೂರು ಮಹಾನಗರ ಪಾಲಿಕೆ, ಮಂಗಳೂರು ಮಹಾನಗರ ಪಾಲಿಕೆ, ಶಿವಮೊಗ್ಗ ಮಹಾನಗರ ಪಾಲಿಕೆ, ದಾವಣಗೆರೆ ಮಹಾನಗರ ಪಾಲಿಕೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಬಿಬಿಎಂಪಿಯಲ್ಲಿ ಸುಮಾರು 6000ಕ್ಕೂ ಹೆಚ್ಚು ವಿವಿಧ ವೃಂದದ ಅಧಿಕಾರಿ/ನೌಕರರ ಹುದ್ದೆಗಳು ಖಾಲಿ ಇವೆ. ಹೀಗಾಗಿ, ಹಾಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಯಾವುದೇ ನೋಟಿಸ್ ನೀಡದೆ ನೌಕರರನ್ನು ಅಮಾನತ್ತು ಮಾಡಿರುವುದನ್ನು, ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ರೀತಿ ಕ್ರಮ ವಹಿಸಿಲ್ಲ ಎಂದು ನೌಕರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
Advertisement