
ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಅಲ್ಲದೆ ಹಲವು ಬಾರಿ ಹಲವು ಶಾಸಕರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತುಗಳನ್ನು ಆಡಿದ್ದರು. ಇದೀಗ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು, 'ನಿಮಗೆ ಗ್ಯಾರಂಟಿ ಯೋಜನೆಯ ಅಕ್ಕಿ ಬ್ಯಾಡ ಅಂದರೆ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ಉತ್ತಮ ರಸ್ತೆಗಳು ಬೇಕು ಅಂದರೆ ಅಕ್ಕಿ ಸೇರಿದಂತೆ ಎಲ್ಲವೂ ನಿಲ್ಲುತ್ತವೆ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇದೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಹೇಳಿದ್ದಾರೆ.
ಕೊಪ್ಪಳದ ಕುಕನೂರು ತಾಲೂಕಿನ ರ್ಯಾವಣಿಕದಲ್ಲಿ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ವೇಳೆ, ರೈತರೊಬ್ಬರು 'ನಮ್ಮ ಹೊಲಕ್ಕೆ ಹೋಗುವ ರಸ್ತೆ ಮಾಡಿಕೊಡಿ' ಎಂದು ಮನವಿ ಮಾಡಿದರು. ಅದಕ್ಕೆ ಬಸವರಾಜ ರಾಯರೆಡ್ಡಿ ಅವರು ಈ ಮಾತನ್ನಾಡಿದರು. ಸದ್ಯ ಬಸವರಾಜ ರಾಯರೆಡ್ಡಿಯವರ ಈ ಹೇಳಿಕೆ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲು ದಾರಿ ಮಾಡಿಕೊಟ್ಟಿದೆ.
Advertisement