
ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ (The New Indian express newspaper) ಬೆಂಗಳೂರು ಆವೃತ್ತಿಯಲ್ಲಿ ವರದಿ ಬಳಿಕ ದುಸ್ಥಿತಿ ತಲುಪಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಶನಿವಾರ ಭೇಟಿ ನೀಡಿದ್ದು, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೇ.15 ರಂದು Channapatna Lakes Choked By Sewage, Lack UGD System ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಉಪ ಲೋಕಾಯುಕ್ತರು ಚನ್ನಪಟ್ಟಣದ ಹಲವಾರು ಕೆರೆಗಳಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಭೇಟಿ ವೇಳೆ ಈಗಾಗಲೇ ಹೊರಡಿಸಲಾಗಿರುವ ನಿರ್ದೇಶನಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ನ್ಯಾಯಮೂರ್ತಿ ಫಣೀಂದ್ರ ಅವರು ರಾಮನಗರದ ಉಪ ಆಯುಕ್ತ ಯಶವಂತ್ ವಿ ಗುರುಕರ್ ಅವರಿಗೆ ಸೂಚಿಸಿದರು. ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾಲಕಾಲಕ್ಕೆ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ನಗರ ಪುರಸಭೆಯ ಆಯುಕ್ತರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ನೀರಾವರಿ ಇಲಾಖೆ, ಸಮೀಕ್ಷೆ ಮತ್ತು ವಸಾಹತು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಈ ಸಮಿತಿಯ ಭಾಗವಾಗಿರಲಿದ್ದಾರೆ.
TNIE ವರದಿಯನ್ನು ಆಧರಿಸಿ ಉಪಲೋಕಾಯುಕ್ತರು ಒತ್ತುವರಿ ಮತ್ತು ನಿರ್ವಹಣೆ ಕೊರತೆ ಎದುರಿಸುತ್ತಿರುವ ತಾಲ್ಲೂಕಿನ ಕುಡ್ಲೂರು, ರಾಮಮ್ಮನಕೆರೆ, ಶೆಟ್ಟಿಹಳ್ಳಿ ಕೆರೆ, ಕುಡಿನೀರುಕಟ್ಟೆ ಕೆರೆ, ಸುಣ್ಣಘಟ್ಟ ಕೆರೆ, ಹೊಡಿಕೆ ಹೊಸಹಳ್ಳಿ ಕೆರೆಗಳಿಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿಸಿದರು. ಈ ವೇಳೆ ಕೆರೆಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಮೊದಲಿಗೆ ಕೂಡ್ಲೂರು ಕೆರೆಗೆ ಭೇಟಿ ನೀಡಿದ ಫಣೀಂದ್ರ ಅವರು, ಕೆರೆ ಒತ್ತುವರಿ ಜಾಗ ವೀಕ್ಷಿಸಿದರು. ಕೆರೆಯ ತೂಬು ಮುಚ್ಚಿರುವ ಜಾಗಕ್ಕೆ ಅಧಿಕಾರಿಗಳೊಂದಿಗೆ ಒಂದು ಕಿ.ಮೀ.ಗೂ ಹೆಚ್ಚು ದೂರ ನಡೆದು ವೀಕ್ಷಿಸಿದರು. ಕೆರೆಗಳಿಗೆ ಕೊಳಚೆ ನೀರು ಹರಿದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರೆಗಳು ನಿರ್ವಹಣೆ ಇಲ್ಲದೆ ಸೊರಗಿದ್ದು, ವಸತಿ ಪ್ರದೇಶಗಳ ಚರಂಡಿ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ನೀರು ಮಲಿನವಾಗಿದೆ. ಹೂಳಿನ ಪ್ರಮಾಣವೂ ಹೆಚ್ಚಾಗಿದೆ. ಇದು ಹೀಗೆಯೇ ಮುಂದುವರಿದರೆ ಕೆರೆ ನೀರು ಬಳಸಲಾಗದ ಸ್ಥಿತಿ ಎದುರಾಗಲಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.
ಇದೇ ವೇಳೆ ಕೆರೆಯ ಒತ್ತುವರಿ ತೆರವು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎಷ್ಟು ದಿನಗಳಲ್ಲಿ ಬಗೆಹರಿಸುತ್ತೀರಿ? ಎಂದು ನ್ಯಾ. ಫಣೀಂದ್ರ ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ವೇಳೆ ಯುಜಿಡಿಗಾಗಿ 94 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಆದರೆ, ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆಗೆ ಭೂ ಸ್ವಾಧೀನಕ್ಕಾಗಿ 6 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು ರಾಜ್ಯವು ತಿರಸ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಳಿಕ ಉಪ ಲೋಕಾಯುಕ್ತರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಲು ಮತ್ತು ಜಲಮೂಲಗಳ ಮಾಲಿನ್ಯವನ್ನು ಪರಿಹರಿಸಲು ಅಗತ್ಯವಿರುವ ನಿಧಿಗೆ ಅನುಮೋದನೆ ಪಡೆಯಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುವುದಾಗಿ ಹೇಳಿದರು. ಇದೇ ವೇಳೆ ವಿವರವಾದ ಯೋಜನಾ ವರದಿಯನ್ನು ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಹೊಡಿಕೆಹೊಸಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡುವಾಗ ಕೂಡ್ಲೂರಿನ ಕಣ್ವಾ ನದಿಯ ದಡದಲ್ಲಿರುವ ಪ್ರಾಚೀನ ಶ್ರೀರಾಮ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಹೊಳೆಯ ದುಃಸ್ಥಿತಿ ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನದಿ ಹರಿವನ್ನು ಸುಗಮಗೊಳಿಸಲು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದರು.
ಬಳಿಕ TNIE ವರದಿ ಬೆಳಕು ಚೆಲ್ಲಿದ್ದ ವಿಷಯಗಳ ಕುರಿತು ಪೊಲೀಸ್ ವರಿಷ್ಠಾಧಿಕಾರಿ (SP) ಸ್ನೇಹಾ ಪಿ ವಿ, ರಾಮನಗರ ಅವರಿಂದ ವರದಿಯನ್ನು ಪಡೆದರು.
ವರದಿಯಲ್ಲಿ, ಕೆರೆಗಳು ಅತಿಕ್ರಮಣಗೊಂಡಿರುವದು ಕೂಡ್ಲೂರು ಕೆರೆ ಮತ್ತು ಶೆಟ್ಟಳ್ಳಿ ಕೆರೆಯ ನೀರು ಹೆಚ್ಚು ಕಲುಷಿತವಾಗಿರುವುದಾಗಿ ಎಸ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
Advertisement