
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣವೊಂದರ ಕುರಿತು ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದ ಮೇಲೆ ಪತ್ರಕರ್ತರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪತ್ರಕರ್ತ ಸುದರ್ಶನ್ ಬೆಳಲು ಅವರು 'ಹೊಸ ಕನ್ನಡ' ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದ್ದು, ಧರ್ಮಸ್ಥಳದಲ್ಲಿ ನಡೆದ ಹಿಂದಿನ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದ ವ್ಯಕ್ತಿಯನ್ನು ಪ್ರತಿನಿಧಿಸುವ ಕಾನೂನು ತಂಡದ ಭೇಟಿಯನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಎಂದಿದ್ದಾರೆ.
ದಕ್ಷಿಣ ಕನ್ನಡ ಪೊಲೀಸರು ಈ ವರದಿಯನ್ನು ಸತ್ಯ ಅಥವಾ ಪುರಾವೆಗಳನ್ನು ಪರಿಶೀಲಿಸದೆ ಪ್ರಕಟಿಸಲಾಗಿದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕಾನೂನು ತಂಡವು ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಲು ಪೂರ್ವಾನುಮತಿ ಪಡೆದಿಲ್ಲ ಮತ್ತು ಅಧಿಕಾರಿಯ ಅನುಪಸ್ಥಿತಿಯು ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 353(1)(ಬಿ) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಸದ್ಯ ತನಿಖೆ ನಡೆಯುತ್ತಿದೆ.
Advertisement