
ಕಲಬುರಗಿ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡದೆ.
ರಾಜ್ಯ ಸರಕಾರದ ಆದೇಶವನ್ನು ಪ್ರಶ್ನಿಸಿ ಭಾಲ್ಕಿ ಮೂಲದ ಶ್ರೀಕಾಂತ್ ಅನಂತಾಚಾರ್ಯ ಜೋಶಿ ಸೇರಿ ವಿವಿಧ 18 ಜನೌಷಧಿ ಕೇಂದ್ರಗಳ ಮಾಲಕರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಕಲಬುರಗಿ ಪೀಠದಲ್ಲಿ ನ್ಯಾ| ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ನಿಷೇಧಿಸಿ ಇನ್ನು ಮುಂದೆ ಈ ಕೇಂದ್ರಗಳ ಹಂಚಿಕೆ ಸ್ಥಗಿತಗೊಳಿಬೇಕು ಎಂದು ರಾಜ್ಯ ಸರ್ಕಾರ 2025ರ ಮೇ 14ರಂದು ಹೊರಡಿಸಿರುವ ಆದೇಶವು ಏಕಪಕ್ಷೀಯವಾಗಿದ್ದು, ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಪ್ರತಿವಾದಿಗಳ ಪರವಾದ ಯಾವುದೇ ಏಜೆಂಟರು ಸೇವಕರು ಅಥವಾ ಯಾರಾದರೂ ಅವರ ಹೆಸರು ಹೇಳಿಕೊಂಡು ಬಲವಂತದ ಕ್ರಮಕ್ಕೆ ಮುಂದಾಗದಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರ ಜನೌಷಧಿ ಕೇಂದ್ರಗಳನ್ನು ಪ್ರತಿಬಂಧಿಸಬಾರದು’ ಎಂದು ಆದೇಶಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ವೈದ್ಯಕೀಯ ಹಾಗೂ ಔಷಧೀಯ ಬ್ಯೂರೊ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸೇರಿದಂತೆ ಪ್ರಕರಣದ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆ ಮುಂದೂಡಿತು.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ (PMBJP) ಅಡಿಯಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವ ಗುರಿ ಹೊಂದಿದೆ. ಕರ್ನಾಟಕದಲ್ಲಿ ನೂರಾರು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿವೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳನ್ನು ಕೂಡಲೇ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಅವರು ಆದೇಶ ಹೊರಡಿಸಿದ್ದರು.
ರೋಗಿಗಳು ಯಾವುದೇ ಔಷಧವನ್ನು ಆಸ್ಪತ್ರೆಯ ಹೊರಗೆ ಖರೀದಿಸದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು, ಅನುಮೋದನೆಗೆ ಬಾಕಿ ಇರುವ ಅರ್ಜಿಗಳನ್ನು ತಿರಸ್ಕರಿಸಲು ಆದೇಶದಲ್ಲಿ ತಿಳಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅನ್ಯಾಯದ ನಡೆಗೆ ತಕ್ಕ ಶಾಸ್ತಿ: BJP ಟೀಕೆ
ಜನೌಷಧಿ ಕೇಂದ್ರಗಳ ಸ್ಥಗಿತ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕುರಿತು ಬಿಜೆಪಿ ಟೀಕೆ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ಬಡವರನ್ನು ನರಳುವಂತೆ ಮಾಡಿದ್ದ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಲೂಟಿಕೋರ ಸರ್ಕಾರದ ಅನ್ಯಾಯದ ಆದೇಶಕ್ಕೆ ತಡೆ ನೀಡಿ, ಜನಹಿತಾಸಕ್ತಿ ಎತ್ತಿ ಹಿಡಿದಿದೆ ಎಂದು ಹೇಳಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನಔಷಧಿ ಕೇಂದ್ರಗಳನ್ನು ಮುಚ್ಚಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಿರ್ಣಯಕ್ಕೆ ಮಾನ್ಯ ಹೈಕೋರ್ಟ್ ತಡೆ ನೀಡುವ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಛೀಮಾರಿ ಹಾಕಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅನ್ಯಾಯದ ನಡೆಗಳಿಗೆ ನ್ಯಾಯಾಲಯ ಛೀಮಾರಿ ಹಾಕುತ್ತಿರುವುದು ಇದೆ ಮೊದಲಲ್ಲ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದ ಮುಸ್ಲಿಂ ಮತಾಂಧರ ಮೇಲಿನ ಕೇಸ್ ವಾಪಸ್ ಪಡೆಯಲು ಹೊಂಚು ಹಾಕಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿ, ಸಿದ್ದರಾಮಯ್ಯ ಸರ್ಕಾರದ ಓಲೈಕೆ ರಾಜಕಾರಣಕ್ಕೆ ನ್ಯಾಯಾಲಯ ಚಡಿ ಏಟು ಕೊಟ್ಟಿತ್ತು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಪಶು ಚಿಕಿತ್ಸಾಲಯಕ್ಕೆ ಬೀಗ ಹಾಕಿ ಅದನ್ನ ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಲು ಹೊಂಚು ಕಾಕಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಮಾನ್ಯ ಹೈಕೋರ್ಟ್ ಛೀಮಾರಿ ಹಾಕಿತ್ತು.
ವಿಧಾನ ಪರಿಷತ್ ಸದಸ್ಯ ಶ್ರೀ ಸಿ.ಟಿ.ರವಿ ಅವರನ್ನ ಅಕ್ರಮವಾಗಿ ಬಂಧಿಸಿದ್ದು ಅತ್ಯಂತ ತಪ್ಪು ಎಂದು ರಾಜ್ಯ ಸರ್ಕಾರದ ನಿರಂಕುಶವಾದಿ ಧೋರಣೆಗೆ ಛೀಮಾರಿ ಹಾಕಿದ್ದ ಮಾನ್ಯ ಹೈಕೋರ್ಟ್, ತತಕ್ಷಣವಾಗಿ ಅವರನ್ನು ಬಿಡುಗಡೆಗೊಳಿಸಿ ಎಂದು ಆದೇಶ ನೀಡಿತ್ತು. ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಿಡಿಎ ಸಂಸ್ಥೆಯನ್ನು ಭ್ರಷ್ಟಾಚಾರ, ಅವ್ಯವಸ್ಥೆಯ ಕೂಪವಾಗಿಸಿರುವ ಕಾಂಗ್ರೆಸ್ ಸರ್ಕಾರವನ್ನ ಮಾನ್ಯ ಹೈಕೋರ್ಟ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಮಾರುವೇಷದಲ್ಲಿ ಒಮ್ಮೆ ನೋಡಿಕೊಂಡು ಬನ್ನಿ, ಸುಗ್ರೀವಾಜ್ಞೆ ಮೂಲಕ ಬಿಡಿಎ ಸಂಸ್ಥೆ ಮುಚ್ಚುವುದು ಒಳ್ಳೆಯದು ಎಂದು ಛೀಮಾರಿ ಹಾಕಿತ್ತು.
ಸರ್ಕಾರಿ ವಸತಿ ಶಾಲೆಯಲ್ಲಿ ಓದುವ ಬಡ ಕುಟುಂಬದ ಮಕ್ಕಳನ್ನ ಮಲಗುಂಡಿಗಿಳಿಸಿದವರ ಮೇಲೆ ಕ್ರಮ ಕೈಗೊಳ್ಳದ್ದಕ್ಕೆ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ನ್ಯಾಯಾಲಯ ಛೀಮಾರಿ ಹಾಕಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳ ವಿರುದ್ಧ ಸುಳ್ಳು ಕೇಸು ದಾಖಲಿಸಿ ಕಡೆಗೆ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಮೂಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ನೀಡಿದ್ದ ಅನುಮತಿ ವಿರುದ್ಧ ಕೋರ್ಟ್ ಮೆಟ್ಲಲೇರಿದಾಗಲೂ ಸಿದ್ದರಾಮಯ್ಯ ಸರ್ಕಾರ ಮುಖಭಂಗ ಅನುಭವಿಸಿತ್ತು. ಸಿಎಂ ಸಿದ್ದರಾಮಯ್ಯ ಅವರೇ ನ್ಯಾಯಾಲಯಗಳ ಕೈಯಲ್ಲಿ ಛೀಮಾರಿ ಹಾಕಿಸಿಕೊಳ್ಳುವಲ್ಲಿ ನಿಮ್ಮ ಸರ್ಕಾರ ದಾಖಲೆ ಬರೆದಿದೆ. ತಾವು ರಾಜೀನಾಮೆ ನೀಡೋದಕ್ಕೆ ಇನ್ನೆಷ್ಟು ಬಾರಿ ಛೀಮಾರಿ ಹಾಕಿಸಿಕೊಳ್ಳಬೇಕು? ಎಂದು ವ್ಯಂಗ್ಯವಾಡಿದ್ದಾರೆ.
Advertisement