MM Hills ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಸರ್ಕಾರ ಮುಂದು: ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ

ಮಲೆಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಎಲ್ಲಾ ಜನಪ್ರತಿನಿಧಿಗಳು, ಬಾಧ್ಯಸ್ಥರೊಂದಿಗೆ ಸಭೆ ನಡೆಸಿ, ಪ್ರಸ್ತಾವನೆ ಸಲ್ಲಿಸಬೇಕು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಲೆಮಹದೇಶ್ವರ ಬೆಟ್ಟವನ್ಯ ಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಸಾಜ್ಯ ಸರ್ಕಾರ ಮುಂದಾಗಿದ್ದು, ಈ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವಿಕಾಸಸೌಧ ಸೋಮವಾರ ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯ ಜೀವಿ ಪರಿಪಾಲಕರು ಸೇರಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಮಂಗಳವಾರ ಸಭೆ ನಡೆಸಿದರು.

ಸಭೆಯಲ್ಲಿ ಮಲೆಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಎಲ್ಲಾ ಜನಪ್ರತಿನಿಧಿಗಳು, ಬಾಧ್ಯಸ್ಥರೊಂದಿಗೆ ಸಭೆ ನಡೆಸಿ, ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ವನ್ಯ ಜೀವಿಗಳ ಅಸಹಜ ಸಾವು ನಿಯಂತ್ರಿಸಲು ಮತ್ತು ವನ್ಯಮೃಗಗಳ ದಾಳಿಯಿಂದ ಜೀವಹಾನಿ ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಆಯಾವಲಯದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೊಣೆಗಾರಿಕೆ ನೀಡಬೇಕು ಎಂದು ಹೇಳಿದರು.

ತಮಿಳುನಾಡಿನಿಂದ ಸಾವಿರಾರು ಹಸು, ಎಮ್ಮೆಗಳನ್ನು ಮೇವಿಗಾಗಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ಅರಣ್ಯ ಪ್ರದೇಶಕ್ಕೆ ಕರೆತರಲಾಗುತ್ತಿದೆ. ಇದೊಂದು ಉದ್ಯಮವಾಗಿ ಮಾರ್ಪಟ್ಟಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ. ಸ್ಥಳೀಯ ಜಾನುವಾರುಗಳನ್ನು ಮೇಯಿಸಲು ಪರವಾನಗಿ ನೀಡಿ, ಹೊರರಾಜ್ಯದ ಜಾನು ವಾರುಗಳನ್ನು ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮ ಕರೆತರುವುದಕ್ಕೆ ನಿಷೇಧಿಸಬೇಕು.

ಸಾವಿರಾರು ಜಾನುವಾರುಗಳು ಬಂದು ವನ್ಯ ಜೀವಿಧಾಮದಲ್ಲಿ ಮೇವನ್ನು ಖಾಲಿ ಮಾಡಿದರೆ ಇಲ್ಲಿನ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

File photo
5 ಹುಲಿಗಳ ಸಾವು: ಡಿಸಿಎಫ್ ಸೇರಿ ನಾಲ್ವರು ಅಧಿಕಾರಿಗಳ ಅಮಾನತಿಗೆ ಈಶ್ವರ್ ಖಂಡ್ರೆ ಶಿಫಾರಸು

ರಾಜ್ಯದಲ್ಲಿ 40 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶವಿದ್ದು, ಭೌತಿಕವಾಗಿ ಅಷ್ಟು ದೊಡ್ಡ ಪ್ರಮಾಣದ ಅರಣ್ಯ ಪ್ರದೇಶ ಕಾಯುವುದು ಕಷ್ಟ. ಹೀಗಾಗಿ, ವನ್ಯ ಜೀವಿಗಳ ಕಳ್ಳಬೇಟೆ, ಅರಣ್ಯ ಒತ್ತುವರಿ, ಮರಗಳ ಅಕ್ರಮ ಕಡಿತಲೆ ಸೇರಿ ಅರಣ್ಯ ಮತ್ತು ವನ್ಯಜೀವಿಗಳಿಗೆ ಸಮಸ್ಯೆಯಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ, ಡೋನ್ ಕ್ಯಾಮರಾ ಬಳಕೆ, ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಆ ಕ್ಯಾಮೆರಾಗಳ ದೃಶ್ಯಗಳ ಆಧಾರದಲ್ಲಿ ಅಕ್ರಮ ಎಸಗುವವರ ಮೇಲೆ ನಿಗಾವಹಿಸಬೇಕು. ಅದಕ್ಕಾಗಿ ಕೇಂದ್ರೀಕೃತ ಕಮಾಂಡ್ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಅಧಿಕಾರಿಗಳು ಖಾಲಿ ಹುದ್ದೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ತಕ್ಷಣ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಕಾಡಂಚಿನಲ್ಲಿನ ಗ್ರಾಮಗಳ ಜನರೊಂದಿಗೆ ಅರಣ್ಯಾಧಿಕಾರಿ, ಸಿಬ್ಬಂದಿ ಸೌಹಾರ್ದಯುತ ಸಂಬಂಧ ಹೊಂದಬೇಕು. ಜನರಿಗೆ ಅರಣ್ಯ ಮತ್ತು ವನ್ಯ ಜೀವಿಗಳ ಮಹತ್ವ ತಿಳಿಸಬೇಕು. ಕಾಡಂಚಿನ ಜನರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕೌಶಲ್ಯ ತರಬೇತಿ ಕೊಡಬೇಕು. ಇದು ಉತ್ತಮ ರಕ್ಷಣಾ ಕ್ರಮಗಳಿಗೆ ಸಹಾಯ ಮಾಡುತ್ತದೆ ಎಂದು ಸೂಚಿಸಿದರು.

2021 ರಲ್ಲಿ ಎಂಎಂ ಹಿಲ್ಸ್ ಅನ್ನು ಹುಲಿ ಮೀಸಲು ಪ್ರದೇಶವೆಂದು ಘೋಷಿಸುವ ರಾಜ್ಯ ವನ್ಯಜೀವಿ ಮಂಡಳಿಯ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದಿಸಿತ್ತು. ಆದಾಗ್ಯೂ, ಕರ್ನಾಟಕ ಸರ್ಕಾರ ಅಂತಿಮ ಅನುಮೋದನೆ ನೀಡಿರಲಿಲ್ಲ. ಸ್ಥಳೀಯ ಶಾಸಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಎಂಎಂ ಹಿಲ್ಸ್ ಅನ್ನು ಹುಲಿ ಮೀಸಲು ಪ್ರದೇಶವೆಂದು ಘೋಷಿಸಲು, ಸ್ಥಳೀಯ ಶಾಸಕರ ಲಿಖಿತ ಒಪ್ಪಿಗೆ ಪಡೆದ ನಂತರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಪ್ರಸ್ತಾವನೆಯನ್ನು ಮತ್ತೊಮ್ಮೆ ಅಂಗೀಕರಿಸಲಾಗುವುದು. ನಂತರ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಅಂತಿಮ ಅನುಮೋದನೆ ಪಡೆಯಲಾಗುತ್ತದೆ. 2021 ರಲ್ಲಿ ಈಗಾಗಲೇ ಅನುಮೋದನೆ ಪಡೆಯಲಾಗಿರುವುದರಿಂದ ಕೇಂದ್ರ ಸರ್ಕಾರದ ಅನುಮತಿ ಮತ್ತೊಮ್ಮೆ ಪಡೆಯುವ ಅಗತ್ಯವಿರುವುದಿಲ್ಲ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com