
ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಈ ವರ್ಷದ ಮೇ ಯಿಂದ ಜೂನ್ ತಿಂಗಳವರೆಗೆ ಸಂಭವಿಸಿದ ಶಂಕಿತ ಹಠಾತ್ ಹೃದಯಾಘಾತದಿಂದ ಮೃತಪಟ್ಟವರಲ್ಲಿ ಶೇ. 30 ರಷ್ಟು ಮಂದಿ ಆಟೋ ಅಥವಾ ಕ್ಯಾಬ್ ಚಾಲಕರೇ ಆಗಿದ್ದಾರೆ. ರಾಜ್ಯ ಸರ್ಕಾರದ ಸಮಿತಿಯ ತನಿಖೆಯಿಂದ ಇದು ತಿಳಿದುಬಂದಿದೆ.
40 ದಿನಗಳಲ್ಲಿ ವರದಿಯಾದ 24 ಸಾವುಗಳ ಹಿಂದಿನ ಕಾರಣಗಳು, ಮಾದರಿಗಳನ್ನು ವಿಶ್ಲೇಷಿಸಲು ಮತ್ತು ಈ ಸಾವುಗಳು ಹೆಚ್ಚಿನ ಜನರ ಆರೋಗ್ಯದ ಟ್ರೆಂಡ್ ಸೂಚಿಸುತ್ತವೆಯೇ ಎಂಬುದನ್ನು ನಿರ್ಣಯಿಸುವ ಕಾರ್ಯವನ್ನು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಎಸ್.ರವೀಂದ್ರನಾಥ್ ಅವರ ನೇತೃತ್ವದ ಸಮಿತಿಗೆ ವಹಿಸಲಾಗಿದೆ.
ಪರೀಕ್ಷಿಸಿದ 24 ಮೃತದೇಹಗಳ ಪೈಕಿ, ಮರಣೋತ್ತರ ಪರೀಕ್ಷೆ ಅಥವಾ ಇಸಿಜಿ ಪುರಾವೆಗಳ ಆಧಾರದ ಮೇಲೆ 10 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಇವರಲ್ಲಿ ಮೂವರಿಗೆ ಹೃದ್ರೋಗ ಇದದ್ದು ಗೊತ್ತಾಗಿದೆ. ಅವರಲ್ಲಿ ಒಬ್ಬರು ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮತ್ತೊಬ್ಬರಿಗೆ ಆಂಜಿಯೋಪ್ಲ್ಯಾಸ್ಟಿ ಆಗಿತ್ತು. ಇನ್ನೊಬ್ಬರು ರಕ್ತನಾಳ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ.
ರೋಗಲಕ್ಷಣಗಳು, ಸಾಂದರ್ಭಿಕ ಅಂಶಗಳು ಮತ್ತು ಹೃದಯ ಸಮಸ್ಯೆಗಳ ಆಧಾರದ ಮೇಲೆ 10 ಜನರು ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿರುವುದಾಗಿ ವರ್ಗೀಕರಿಸಲಾಗಿದೆ. ಎಂಟು ಪ್ರಕರಣಗಳಲ್ಲಿ ಮದ್ಯಪಾನವು ಸಾವಿಗೆ ಪ್ರಮುಖ ಅಪಾಯಕಾರಿ ಅಂಶ ಎನ್ನಲಾಗಿದೆ. ಆರು ಪ್ರಕರಣಗಳಲ್ಲಿ ಧೂಮಪಾನವು ಮತ್ತೊಂದು ಕಾರಣವೆಂದು ಕಂಡುಬಂದಿದೆ. ಉಳಿದ ನಾಲ್ಕು ಮಂದಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ರಸ್ತೆ ಅಪಘಾತ, ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಮತ್ತು ಶಂಕಿತ ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹೃದಯಾಘಾತ ಸಾವು ಪ್ರಮಾಣದಲ್ಲಿ ಏರಿಕೆಯಾಗಿಲ್ಲ:
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೃದಯಾಘಾತ ಸಾವು ಪ್ರಮಾಣದಲ್ಲಿ ಯಾವುದೇ ಏರಿಕೆಯಾಗಿಲ್ಲ
ಡೇಟಾವನ್ನು ವಿಶ್ಲೇಷಿಸಿದಾಗ ಮೃತರಲ್ಲಿ 14 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 19, 21, ಮತ್ತು 23 ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 10 ಮಂದಿ 45 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ. ಆದರೆ ಕಳೆದ ವರ್ಷ ಮೇ ಮತ್ತು ಜೂನ್‌ಗೆ ಹೋಲಿಸಿದರೆ, ಸಾವುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಈ ವರ್ಷದ ಡೇಟಾ ಕೂಡ ಯಾವುದೇ ಹಠಾತ್ ಅಥವಾ ಆತಂಕಕಾರಿ ಏರಿಕೆಯನ್ನು ತೋರಿಸುವುದಿಲ್ಲ ಎಂದರು.
ಜೀವನಶೈಲಿ, ಉದ್ಯೋಗದ ಒತ್ತಡವೂ ಸಾವಿಗೆ ಪ್ರಮುಖ ಕಾರಣ: ಮೈಸೂರು, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ಜಯದೇವ ಸಂಸ್ಥೆಯ ಕೇಂದ್ರಗಳಿಂದ ಹೃದಯ ಸಂಬಂಧಿ ದತ್ತಾಂಶವನ್ನು ತನಿಖೆಯು ಪರಿಶೀಲಿಸಿದೆ. ಇದರಲ್ಲಿ ಕಳೆದ ಆರು ತಿಂಗಳುಗಳಲ್ಲಿ ಹೃದಯ ಸಂಬಂಧಿತ ಸಾವಿನಲ್ಲಿ ಯಾವುದೇ ಹೆಚ್ಚಳವನ್ನು ತೋರಿಸಿಲ್ಲ. ಆದಾಗ್ಯೂ, ಮೃತರಲ್ಲಿ ಸುಮಾರು ಶೇ. 30 ರಷ್ಟು ಮಂದಿ ಆಟೋ ಮತ್ತು ಕ್ಯಾಬ್ ಚಾಲಕರು ಆಗಿದ್ದಾರೆ. ಅವರಲ್ಲಿ ಹೆಚ್ಚಿನವರು ಹಾಸನದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದಾರೆ. ಜೀವನಶೈಲಿ ಮತ್ತುಉದ್ಯೋಗದ ಒತ್ತಡದಿಂದ ಅವರು ಸಾವನ್ನಪ್ಪಿದ್ದಾರೆ. ಚಾಲನೆ ಮಾಡುವಾಗ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದು, ಅನಿಯಮಿತ ಆಹಾರ ಪದ್ಧತಿ, ಧೂಮಪಾನ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ಕಳಪೆ ನಿದ್ರೆ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಆಟೋ ಮತ್ತು ಕ್ಯಾಬ್ ಚಾಲಕರಿಗೆ ನಿಯಮಿತ ಆರೋಗ್ಯ ತಪಾಸಣೆಯನ್ನು ಪರಿಚಯಿಸಲು ಸರ್ಕಾರ ಶಿಫಾರಸು ಮಾಡಿದೆ. ವಾರ್ಷಿಕ ಅಥವಾ ದ್ವೈ-ವಾರ್ಷಿಕ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡಬೇಕು ಜಾಗೃತಿ ಮೂಡಿಸಬೇಕು ಮತ್ತು ಅವರಿಗೆ ಸಮಯೋಚಿತ ಆರೈಕೆ ತಪಾಸಣೆಗೆ ನೆರವಾಗಬೇಕು. ಒಂದು ಜೀವವನ್ನು ಕಳೆದುಕೊಳ್ಳುವುದನ್ನು ತಡೆಯುವುದು ದೊಡ್ಡ ಸಾಧನೆಯಾಗಿದೆ ಎಂದು ಗುಂಡೂರಾವ್ ಹೇಳಿದರು.
ಜಯದೇವ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇ. 20 ರಷ್ಟು ಹೆಚ್ಚಳ: ಕಳೆದ ಕೆಲವು ದಿನಗಳಿಂದ ಸಂಸ್ಥೆಯು ಹೊರರೋಗಿ ವಿಭಾಗಕ್ಕೆ ಭೇಟಿ ನೀಡುವ ರೋಗಿಗಳ ಸಂಖ್ಯೆಯಲ್ಲಿ ಶೇ. 20 ರಷ್ಟು ಹೆಚ್ಚಳವಾಗಿದೆ ಎಂದು ಡಾ ರವೀಂದ್ರನಾಥ್ ಮಾಧ್ಯಮಗಳಿಗೆ ತಿಳಿಸಿದರು.
"ಯುವಕರಲ್ಲಿ ಹೃದಯಾಘಾತದ ವರದಿಗಳ ನಂತರ, ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಸರಾಸರಿ 1,200-1,400 ರೋಗಿಗಳನ್ನು ನೋಡುತ್ತಿದ್ದೇವು. ಆದರೆ ಈಗ ಪ್ರತಿದಿನ ಸುಮಾರು 1,800 ರೋಗಿಗಳನ್ನು ಪರೀಕ್ಷಿಸುತ್ತಿದ್ದೇವೆ. ಮೈಸೂರಿನ ಜಯದೇವದಲ್ಲಿಯೂ ಸಹ, 700 ರಿಂದ 1,000 ದಾಟಿದೆ" ಎಂದು ಅವರು ಹೇಳಿದರು.
ರೋಗಲಕ್ಷಣಗಳನ್ನು ಹೊಂದಿದ್ದರೆ ಅಥವಾ ಅಪಾಯದ ಅರಿವಿದ್ದರೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಗಾಗಬಹುದು. ಇದು ವೈದ್ಯರಲ್ಲಿಯೂ ಒತ್ತಡವನ್ನು ಉಂಟುಮಾಡುತ್ತಿದೆ" ಎಂದು ನಿರ್ದೇಶಕರು ಹೇಳಿದ್ದಾರೆ.
ಶಿಫಾರಸುಗಳು
ಆಸ್ಪತ್ರೆಯಿಂದ ಹೊರಗೆ ಸಂಭವಿಸಿದ ಎಲ್ಲಾ ಹಠಾತ್ ಹೃದಯ ಸಾವಿಗೆ ಹೃದಯಘಾತ ಕಾರಣವೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಲು ಶವಪರೀಕ್ಷೆ ಮಾಡಬೇಕು.
ಎಲ್ಲಾ PHC ಮತ್ತು CHC ಗಳಲ್ಲಿ ಹೃದಯಾಘಾತದ ಪ್ರಕರಣಗಳಿಗೆ ಇಸಿಜಿ ಯಂತ್ರಗಳು ಮತ್ತು ತುರ್ತು ಹೃದಯ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕು.
ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮತ್ತು ಜಿಮ್ನಾಷಿಯಂನಲ್ಲಿ ದೈಹಿಕ ತರಬೇತುದಾರರಂತಹ ಕೇಂದ್ರೀಕೃತ ಗುಂಪುಗಳಿಗೆ CPR ತರಬೇತಿ. ಜನನಿಬಿಡ ಪ್ರದೇಶಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‌ಗಳ (AED) ಲಭ್ಯತೆ
ಕ್ಯಾಬ್ ಮತ್ತು ಆಟೋ ಚಾಲಕರಿಗೆ ಹೃದಯಾಘಾತ ತಪಾಸಣೆ ಮಾಡಬೇಕು
Advertisement