
ಬೆಂಗಳೂರು: ಕಾಂಗ್ರೆಸ್ ಏನು ನೀಡಿದೆ ಅಂತಾ ಕೇಳ್ಬೇಡಿ, ಅದಕ್ಕಿಂತಲೂ ಹೆಚ್ಚಾಗಿ ಮಾತನಾಡುವ ಶಕ್ತಿ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪಕ್ಷದ ನಾಯಕರು ಹಾಗೂ ಸದಸ್ಯರಿಗೆ ಶುಕ್ರವಾರ ತಿಳಿಸಿದರು.
ಭಾರತ್ ಜೋಡೋ ಭವನದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಮತ್ತಿತರರನ್ನು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕಾಗಿ ಗಾಂಧಿ-ನೆಹರು ಕುಟುಂಬದ ತ್ಯಾಗವನ್ನು ಸ್ಮರಿಸಿದರು.
ಕಾಂಗ್ರೆಸ್‌ನ ಶಕ್ತಿ ದೇಶದ ಶಕ್ತಿ, ಇದೆಲ್ಲ ಇತಿಹಾಸ. ಭಾರತದ ಇತಿಹಾಸವನ್ನು ಅಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನನಗೆ ಏನು ನೀಡಿದೆ ಎಂಬುದು ಮುಖ್ಯವಲ್ಲ. ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವ, ಪಂಚಾಯಿತಿ ಸದಸ್ಯ, ನಿಗಮ ಮಂಡಳಿ ಸೇರಿದಂತೆ ಇತರೇ ಅಧಿಕಾರಯುತ ಸ್ಥಾನ ಬೇಕು ಎಂದು ಪಕ್ಷ ಸೇರುವುದು ಮುಖ್ಯವಲ್ಲ. ಈ ಪಕ್ಷಕ್ಕಾಗಿ ದುಡಿಯುವುದು ಮುಖ್ಯ. ಎಲ್ಲರಿಗೂ ಮಾತನಾಡುವ ಶಕ್ತಿ ನೀಡಿರುವುದೇ ಅದರ ಹೆಗ್ಗಳಿಕೆ ಎಂದರು.
ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ಬೇರೆ ಪಕ್ಷದಲ್ಲಿ ಇಂತಹ ಖುರ್ಚಿ (ಅಧಿಕಾರ) ನೀಡಲು ಸಾಧ್ಯವಾಗುತ್ತಿರಲಿಲ್ಲ. ವೇದಿಕೆಯಲ್ಲಿರುವ ಪಕ್ಷದ ನಾಯಕರಿಗೆ ಇಂತಹ ಸ್ಥಾನ ನೀಡಲು ಯಾವುದೇ ಪಕ್ಷಕ್ಕೂ ಆಗುತ್ತಿರಲಿಲ್ಲ. ಕಾಂಗ್ರೆಸ್ದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ನವೆಂಬರ್ ನಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಎದ್ದಿದ್ದ ಊಹಾಪೋಹಗಳಿಗೆ ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ನಂತರ ಉಪ ಮುಖ್ಯಮಂತ್ರಿ ಈ ರೀತಿಯ ಹೇಳಿಕೆ ನೀಡಿದರು.
ಇಡೀ ವಿಶ್ವ ಮೆಚ್ಚುವಂತಹ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆಯನ್ನು ಕಾಂಗ್ರೆಸ್ ನೀಡಿದೆ. ಕೆಲವು ಜನರು ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅದೆಲ್ಲಾ ತಾತ್ಕಾಲಿಕವಾಗಿದೆ. ಕಾಂಗ್ರೆಸ್ ಹೋರಾಡಿ 60 ರಿಂದ 70 ವರ್ಷ ಜನರ ಸೇವೆ ಮಾಡಿದೆ. ನಮಗೆ ಸ್ವಾತಂತ್ರ್ಯ ನೀಡಿದೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ನೆಹರು ಕುಟುಂಬ ತಮ್ಮೆಲ್ಲಾ ಆಸ್ತಿಯನ್ನು ತ್ಯಾಗ ಮಾಡಿದೆ. ಯುಪಿಎ ಅಧಿಕಾರ ರಚನೆಗೆ ರಾಷ್ಟ್ರಪತಿ ಆಹ್ವಾನಿಸಿದರೂ ಸೋನಿಯಾ ಗಾಂಧಿ ಯಾವುದೇ ಅಧಿಕಾರ ಬಯಸಲಿಲ್ಲ. 10 ವರ್ಷಗಳ ಕಾಲ ಸಿಖ್ ಸಮುದಾಯದ ಪ್ರಸಿದ್ಧ ಅರ್ಥಶಾಸ್ತ್ರಜ್ಞರನ್ನು ಪ್ರಧಾನಿಯನ್ನಾಗಿ ಮಾಡಿದರು. ಕಾಂಗ್ರೆಸ್ ಪಕ್ಷ ಹೊರತುಪಡಿಸಿದರೆ ಬೇರೆ ಯಾವುದೇ ಪಕ್ಷ ಇಂತಹ ಇತಿಹಾಸ ಹೊಂದಿಲ್ಲ ಎಂದು ಡಿಕೆ ಶಿವಕುಮಾರ್ ಹೊಗಳಿದರು.
ಇದೇ ವೇಳೆ ಬಿ. ಟಿ. ಲಲಿತಾ ನಾಯಕ್ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಕವಿ ಮನಸ್ಸಿನ ಹೋರಾಟದ ರಾಜಕಾರಣಿಯಾದ ಬಿ.ಟಿ. ಲಲಿತಾ ನಾಯಕ್ ಅವರ ಜೀವನವೇ ಒಂದು ಹೋರಾಟ ಇದ್ದಂತೆ, ಮಾಜಿ ಶಾಸಕರಾಗಿ, ಮಂತ್ರಿಯಾಗಿ ಹೋರಾಟದ ಮೂಲಕ ಬಡವರ ಧ್ವನಿಯಾಗಿ ಬಿ.ಟಿ ಲಲಿತಾ ಅವರು ಸೇವೆಯನ್ನು ಮಾಡುತ್ತಿದ್ದಾರೆ. ಮಾನವೀಯತೆ ಮೌಲ್ಯಗಳನ್ನು ಇಟ್ಟುಕೊಂಡು ಹೋರಾಟ, ಅಕ್ಷರ ಕ್ರಾಂತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
Advertisement