
ಮೈಸೂರು: ನಾಡಿನ ಹಿರಿಯ ಪತ್ರಕರ್ತ, ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ (85) ಅವರು ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಹೃದಯಾಘಾತದಿಂದ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಗಣಪತಿ ಅವರು ವಿಧಿವಶರಾಗಿದ್ದಾರೆ.
ಮಧ್ಯಾಹ್ನ 12ರಿಂದ ಕೆ.ಸಿ.ಬಡಾವಣೆಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನ ಸುಡುವ ಸ್ಮಶಾನದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬವು ಮೂಲಗಳು ಮಾಹಿತಿ ನೀಡಿವೆ.
ಮಾಧ್ಯಮ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಗಣಪತಿ ಅವರು, ತಮ್ಮ ಗರಡಿಯಲ್ಲಿ ಅನೇಕ ಶ್ರೇಷ್ಠ ಪತ್ರಕರ್ತರನ್ನು ರೂಪಿಸಿದ್ದಾರೆ.
ಕೆ.ಬಿ.ಗಣಪತಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿದೆ.
ಕೆಬಿ ಗಣಪತಿ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ʼಲೈಫ್ ಅಂಡ್ ಟೈಮ್ಸ್ʼ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕರಾದ ಅವರು ಬಾಂಬೆ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನು ಪಡೆದಿದ್ದರು.
1961- 1965ರವರೆಗೆ ಬೆಂಗಳೂರಿನಲ್ಲಿ ವಕೀಲರಾಗಿ, 1970ರಲ್ಲಿ ಪೂನಾದಲ್ಲಿ ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಮೈಸೂರು ಕೇಂದ್ರ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
Advertisement