
ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಚಿಕ್ಕತಿರುಪತಿ ಎಂದೇ ಖ್ಯಾತವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ವೇಳೆ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಭಾನುವಾರ ನಡೆದಿದೆ.
ಮಾಲೆಕಲ್ ತಿರುಪತಿ ದೇವಾಲಯವು ಹಾಸನ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಇದನ್ನು ಚಿಕ್ಕತಿರುಪತಿ ಎಂದು ಕರೆಯಲಾಗುತ್ತದೆ. ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ಬಾರಿಯ ಜಾತ್ರೆಯ ಸಂದರ್ಭದಲ್ಲಿ, ದೇವಾಲಯದ ಹೊರಗೆ ಖಾಸಗಿ ಸಂಸ್ಥೆಯೊಂದರಿಂದ ಮೊಸರು ಮತ್ತು ಬಿಸಿಬೇಳೆ ಬಾತ್ ರೂಪದಲ್ಲಿ ಪ್ರಸಾದ ವಿತರಿಸಲಾಗಿತ್ತು.
ಭಾನುವಾರ ರಾತ್ರಿ 7:30ರ ಸುಮಾರಿಗೆ ಸುಮಾರು 1,500 ಭಕ್ತರಿಗೆ ಈ ಪ್ರಸಾದ ವಿತರಣೆಯಾಗಿದೆ. ಇದನ್ನು ಸೇವಿಸಿದ ಕೆಲ ಭಕ್ತರು ಅಸ್ವಸ್ಥರಾಗಿದ್ದಾರೆ.
ಪ್ರಸಾದ ಸೇವಿಸಿದ ಕೆಲವೇ ಗಂಟೆಗಳಲ್ಲಿ, ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಹಲವು ಭಕ್ತರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಒಟ್ಟು 50ಕ್ಕೂ ಅಧಿಕ ಮಂದಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಕೂಡಲೇ ಸ್ಥಳೀಯ ಆಡಳಿತವು ಕ್ರಮ ಕೈಗೊಂಡು, ಅಸ್ವಸ್ಥರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿತು. ಸದ್ಯ, 30ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಘಟನೆಯನ್ನು ತಾಲ್ಲೂಕು ಆಡಳಿತವು ಗಂಭೀರವಾಗಿ ಪರಿಗಣಿಸಿದ್ದು, ಭಕ್ತರು ಸೇವಿಸಿದ ಪ್ರಸಾದದ ಮಾದರಿಗಳನ್ನು ಸಂಗ್ರಹಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಪರೀಕ್ಷೆಗೆ ರವಾನಿಸಿದೆ.
Advertisement