ಉದ್ಯಮಿಗಳಿಗೆ ನಾವು ಕೇವಲ ಭೂಮಿ ಕೊಡುವುದಿಲ್ಲ: ಆಂಧ್ರ ಸಚಿವ ನಾರಾ ಲೋಕೇಶ್ ಗೆ ಎಂಬಿ ಪಾಟೀಲ್ ತಿರುಗೇಟು

ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು.
MB Patil
ಸಚಿವ ಎಂಬಿ ಪಾಟೀಲ್
Updated on

ಬೆಂಗಳೂರು: ರಾಜ್ಯದಲ್ಲಿ ಉದ್ಯಮಿಗಳಿಗೆ ನಾವು ಕೇವಲ ಭೂಮಿ ನೀಡುವುದಿಲ್ಲ. ಭಾರತದ ನಂ.1 ಏರೋಸ್ಪೇಸ್, ರಕ್ಷಣಾ ಪರಿಸರ ವ್ಯವಸ್ಥೆಯನ್ನು ನೀಡುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ್ ಅವರು ಬುಧವಾರ ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಅವರಿಗೆ ತಿರುಗೇಟು ನೀಡಿದ್ದಾರೆ.

ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಕೈಬಿಟ್ಟ ನಂತರ ನಾರಾ ಲೋಕೇಶ್ ಅವರು, “ಡಿಯರ್ ಏರೋಸ್ಪೇಸ್ ಇಂಡಸ್ಟ್ರಿ, ಸುದ್ದಿ ತಿಳಿದು ಬೇಸರವಾಯ್ತು. ನನ್ನ ಬಳಿ ಉತ್ತಮ ಐಡಿಯಾ ಇದೆ. ನೀವು ಯಾಕೆ ಆಂಧ್ರಪ್ರದೇಶದತ್ತ ನೋಡಬಾರದು?” ಎಂದು ಎಕ್ಸ್ ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ನಾರಾ ಲೋಕೇಶ್ ಪೋಸ್ಟ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಎಂಬಿ ಪಾಟೀಲ್ ಅವರು, ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು. ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಿಬಿಡುವುದಿಲ್ಲ ಎಂದರು.

ರಾಜ್ಯವು ಏರೋಸ್ಪೇಸ್ ವಲಯದಲ್ಲಿ ದೇಶದ ಶೇ.65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಕೊಟ್ಟ ಮಾತ್ರಕ್ಕೆ ಅವರು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರ ಕೂಡ ಮಹತ್ತ್ವದ ಪಾತ್ರ ವಹಿಸುತ್ತದೆ ಎಂದು ಎಂಬಿ ಪಾಟೀಲ್ ತಿರುಗೇಟು ನೀಡಿದರು.

MB Patil
ದೇವನಹಳ್ಳಿ ಭೂಸ್ವಾಧೀನ ರದ್ದು: ಏರೋ ಸ್ಪೇಸ್ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ; CM ಪುತ್ರ ನಾರಾ ಲೋಕೇಶ್ ಓಪನ್‌ ಆಫರ್‌!

ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ನಾನೂ ನೋಡಿದ್ದೇನೆ. ನಾನೂ ಅಲ್ಲೇ ಉತ್ತರ ಕೊಟ್ಟಿದ್ದೇನೆ. ಎಂ ಬಿ ಪಾಟೀಲನಿಗೂ ಸಾಮರ್ಥ್ಯವಿದೆ. ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದು ಹೇಳಿದರು.

ಏರೋಸ್ಪೇಸ್ ಉದ್ಯಮಿಗಳಿಗೆ ಬರೀ ಭೂಮಿಯಲ್ಲ, ಅದರ ಜತೆಗೆ ನೀರು, ವಿದ್ಯುತ್ ಎಲ್ಲವನ್ನೂ ಕೊಡುತ್ತೇವೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ‌ ಪಾಲಿನ ನೀರು ಬಳಸಿಕೊಳ್ಳಲು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಈಗ ಉದ್ಯಮಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಸರಕಾರವೇನಾದರೂ ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರೆ, ಆಗ ಅವರು ರೈತರ ಪರವಾಗಿ ಮಾತನಾಡುತ್ತಿದ್ದರು. ವಿರೋಧ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ, ನನಗೆ ರಾಜ್ಯದ ಹಿತಾಸಕ್ತಿ ಮಾತ್ರ ಮುಖ್ಯ ಎಂದು ಸಚಿವರು ಪ್ರತಿಪಾದಿಸಿದರು.

ಕೈಗಾರಿಕಾ ಇಲಾಖೆಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ದೇವನಹಳ್ಳಿ ವಿದ್ಯಮಾನವನ್ನೆಲ್ಲ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಇಲಾಖೆಯ ಪ್ರಗತಿ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಎಂಬಿ ಪಾಟೀಲ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com