
ಅಮರಾವತಿ: 3 ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ರದ್ದಾಗಿದೆ. ಇದರ ಬೆನ್ನಲ್ಲೇ, ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರ ಸಿಎಂ ಪುತ್ರ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್‌ನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಇದರ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಾರಾ ಲೋಕೆಶ್, ಈ ವಿಚಾರ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಉಪಾಯ ಇದೆ. ನೀವು ಆಂಧ್ರಪ್ರದೇಶದಲ್ಲಿ ಏಕೆ ಜಾಗ ನೋಡಬಾರದು? ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ ನಿಮಗಾಗಿ ಸಿದ್ಧವಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಬಯಸುತ್ತೇನೆ ಎಂದು ಅವರು ಏರೋಸ್ಪೇಸ್ ಉದ್ಯಮಿಗಳಿಗೆ ಕರೆಕೊಟ್ಟಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿರುವ ಎಚ್‌ಎಎಲ್ ಉತ್ಪಾದನಾ ಘಟಕವನ್ನು ಕೂಡ ಆಂಧ್ರಕ್ಕೆ ಸ್ಥಳಾಂತರಿಸುವ ಬಗ್ಗೆ ಉತ್ಸಾಹ ತೋರಿತ್ತು. ಇದಕ್ಕೆ ಎಲ್ಲಡೆ ವಿರೋಧದ ಕೂಗು ಕೇಳಿದ್ದರಿಂದ ಅದು ತಣ್ಣಗಾಗಿತ್ತು. ಇನ್ನು ಮಂಗಳವಾರವಷ್ಟೇ ರೈತರ ವಿರೋಧದ ಕಾರಣಕ್ಕೆ ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಏರೋಸ್ಪೇಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ರದ್ದು ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಘೋಷಿಸಿದ್ದರು. ಇದನ್ನು ರೈತರು ಸಂಭ್ರಮಿಸುತ್ತಿರುವಾಗಲೇ ಆಂಧ್ರ ಸಚಿವನ ಕಣ್ಣು ಕರ್ನಾಟಕದ ಉದ್ಯಮಗಳ ಮೇಲೆ ಬಿದ್ದಿದೆ. ಈ ಬಗ್ಗೆ ಸಚಿವ ನಾರಾ ಲೋಕೇಶ್ ಎಕ್ಸ್‌ನಲ್ಲಿ ಬಹಿರಂಗವಾಗಿ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ.
1,777 ಎಕರೆಯಷ್ಟು ಜಮೀನು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡು ಅಲ್ಲಿ ಏರೋಸ್ಪೇಸ್ ಪ್ರಾರಂಭಿಸಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಆದರೆ ಇದನ್ನು ವಿರೋಧಿಸಿ ರೈತರು, ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಯಾವ ಕಾರಣಕ್ಕೂ ಭೂಮಿ ಕೊಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಸರ್ಕಾರದ ವಿರುದ್ಧ ದಂಗೆ ಎದ್ದ ಕಾರಣ ಕೊನೆಗೂ ಮಣಿದ ಸರ್ಕಾರ, ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಸಚಿವ ತನ್ನ ಅವಕಾಶವಾದಿತನವನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ರೈತರ ವಿರೋಧ, ಸರ್ಕಾರದ ನಿರ್ಧಾರವನ್ನೇ ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ.
ಬೆಂಗಳೂರು ಆಂಧ್ರಪ್ರದೇಶದ ಗಡಿಗೆ ಸಮೀಪದಲ್ಲಿರುವುದಿರಂದ ಈ ಭಾಗದಲ್ಲೇ ಏರೋಸ್ಪೇಸ್ ಉದ್ಯಮಗಳಿಗೆ ನೆಲೆ ನೀಡುವ ಮೂಲಕ ಲಾಭ ಮಾಡಿಕೊಳ್ಳಲು ಆಂಧ್ರ ಕುತಂತ್ರ ಹೆಣೆದಿದೆ. ಈ ಆಹ್ವಾನವನ್ನು ಉದ್ಯಮಿಗಳು ಸ್ವೀಕರಿಸುತ್ತಾರಾ? ಅಥವಾ ಕರ್ನಾಟಕದಲ್ಲೇ ಬೇರೆ ಕಡೆ ಭೂಮಿ ಪಡೆಯುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.
Advertisement