
ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆಗ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ವಕೀಲರ ನಿಯೋಗ ಆಗ್ರಹಿಸಿದೆ.
ಸಿಎಂ ನಿವಾಸ 'ಕಾವೇರಿ'ಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ತನಿಖೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ವಿಚಾರಣೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ದಾಖಲೆ ಮಾಡಬೇಕು ಎಂದು ಮನವಿ ಸಲ್ಲಿಸಿತು.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಿ.ಎಸ್.ದ್ವಾರಕನಾಥ್, ಎಸ್.ಬಾಲನ್, ಉಮಾಪತಿ ಎಸ್. ಮೊದಲಾದವರು ಈ ಕುರಿತ ಪತ್ರವನ್ನು ನೀಡಿದರು.
ಧರ್ಮಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರಗಳು, ಹತ್ಯೆಗಳು ನಡೆದಿವೆ. ನೂರಾರು ಶವಗಳನ್ನು ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಹೂಳಲಾಗಿದೆ ಎಂಬ ವಿವರ ಇರುವ ವರದಿಗಳು ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿವೆ. ಈ ಗಂಭೀರ ವಿಷಯದತ್ತ ನೀವು ಗಮನ ಹರಿಸಬೇಕು ಎಂದು ಕೋರಿದ್ದಾರೆ.
ಒಬ್ಬ ಸಾಕ್ಷಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿ, ಕಳೇಬರದ ಮಾಹಿತಿಯನ್ನು ಸಲ್ಲಿಸಿದ್ದಾನೆ. ಜೊತೆಗೆ ನೂರಾರು ಶವಗಳು ಇರುವ ಸ್ಥಳವನ್ನು ತೋರಿಸುತ್ತೇನೆ ಎಂದಿದ್ದಾನೆ. ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವಷ್ಟೇ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಶವಗಳನ್ನು ಹುಡುಕಿ, ಹೊರತೆಗೆಯುವ ಕೆಲಸ ಇನ್ನೂ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಅತ್ಯಂತ ಪ್ರಭಾವಿ, ರಾಜಕೀಯ ನಂಟು ಇರುವ ವ್ಯಕ್ತಿಗಳ ವಿರುದ್ಧ ಆರೋಪ ಎದುರಾಗಿದೆ. ಆದರೆ, ತನಿಖೆ ನಡೆಸುತ್ತಿರುವುದು ಸಬ್ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿ. ಆರೋಪಿಗಳು ತನಿಖೆಯನ್ನು ಪ್ರಭಾವಿಸುವ, ಸಾಕ್ಷ್ಯಗಳನ್ನು ನಾಶಪಡಿಸುವ ಅಪಾಯವಿದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು. ಎಡಿಜಿಪಿ ಒಬ್ಬರನ್ನು ತನಿಖಾ ತಂಡದ ಮುಖ್ಯಸ್ಥರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement