
ಹುಬ್ಬಳ್ಳಿ: ಕೂಡಲಸಂಗಮ ಪಂಚಮಸಾಲಿ ಪೀಠದ ಮುಖ್ಯಸ್ಥ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಯಾರೋ ವಿಷಪ್ರಾಶನ ಮಾಡಲು ಪ್ರಯತ್ನಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಯಾರೋ ವಿಷಪ್ರಾಶನ ಮಾಡಲು ಪ್ರಯತ್ನಿಸಿದ್ದು, ಪಂಚಮಸಾಲಿಗಳಿಗೆ ಮೀಸಲಾತಿ ನೀಡುವಂತೆ ಸ್ವಾಮೀಜಿ ಆರಂಭಿಸಿದ ಹೋರಾಟದ ಹಳಿತಪ್ಪಿಸುವ ತಂತ್ರ ಇದಾಗಿರಬಹುದು ಎಂದು ಆರೋಪಿಸಿದ್ದಾರೆ.
ಮಠದ ಹೊರಗಡೆ ಇಬ್ಬರು ಮುಸ್ಲಿಂ ಸಮಾಜದ ಹುಡುಗರು ಇದ್ದಾರೆ. ಆ ಇಬ್ಬರು ಮಠಕ್ಕೆ ಯಾರು ಬರ್ತಾರೆ ಯಾರು ಹೋಗುತ್ತಾರೆಂಬ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ವೀಡಿಯೋ ಸಹ ಮಾಡಿಕೊಳ್ಳುತ್ತಿದ್ದಾರೆ ಎಂದು ಭಕ್ತರು ನನಗೆ ಹೇಳಿದ್ದಾರೆ. ಅದೇ ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೆ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಶ್ರೀಗಳು ಈ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದಾರೆ. ನನಗೆ ಮನಸ್ಸು ಸರಿಯಾಗುತ್ತಿಲ್ಲ, ನನಗೆ ವಿಷ ಪ್ರಾಶನ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಚೇತರಿಸಿಕೊಂಡ ನಂತರ, ನಾವು ಈ ವಿಷಯವನ್ನು ಚರ್ಚಿಸಿ, ಹೆಚ್ಚಿನ ತನಿಖೆಗೆ ಒತ್ತಾಯಿಸುತ್ತೇವೆಂದು ಹೇಳಿದರು.
ಪಂಚಮಸಾಲಿ ಪೀಠದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲಾಗಿತ್ತು. ಸ್ವಾಮೀಜಿಗಳು ಕ್ಯಾಮೆರಾಗಳನ್ನು ಮರಳಿ ಹಾಕಿಸಿದ್ದರು. ಘಟನೆಯ ವಿಡಿಯೋ ಕ್ಯಾಮೆರಾಗಳಲ್ಲಿ ಸೆರೆಯಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಬೇಕಾಗಿದೆ ಎಂದು ತಿಳಿಸಿದ್ದಾರೆ.
ಸ್ವಾಮೀಜಿ ಸಮುದಾಯದ ಹಿತದೃಷ್ಟಿಯಿಂದ ತ್ಯಾಗ ಮಾಡಿದ್ದಾರೆ. ಸಮುದಾಯ ಅವರನ್ನು ಎಂದಿಗೂ ಕೈಬಿಡುವುದಿಲ್ಲ. ಪಂಚಮಸಾಲಿ ಸಮಾಜ ಟ್ರಸ್ಟ್ ಮತ್ತೊಬ್ಬ ಸ್ವಾಮೀಜಿಯನ್ನು ನೇಮಿಸಿದರೂ, ಸಮುದಾಯ ಆ ನಿರ್ಧಾರವನ್ನು ಸ್ವೀಕರಿಸುವುದಿಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಹಾಗೂ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಲಾಗುವುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
Advertisement