
ಬೆಂಗಳೂರು: ಕೆಪಿಸಿಎಲ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತಿಳಿಸಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 56ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಈಗ ಸ್ವಾವಲಂಬಿಯಾಗಿದ್ದು, ಇದರಲ್ಲಿ ಕೆಪಿಸಿಎಲ್ ನೌಕರರ ಅಪಾರ ಶ್ರಮವಿದೆ ಎಂದರು.
ಪವನ, ಸೌರ, ಉಷ್ಣ, ಜಲ ವಿದ್ಯುತ್ ಉತ್ಪಾದನೆ ಜೊತೆಗೆ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದನೆ ಮಾಡುತ್ತಾ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿದ್ದು ಸ್ವಾವಲಂಬನೆ ಸಾಧಿಸಿದ್ದೀವಿ. 60 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಎಡೆಗೆ ನಾವು ಸಾಗುತ್ತಿದ್ದೇವೆ. ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎನ್ನುವ ವರದಿಗಳು ಬಂದಿವೆ. ಈ ಸಾಧನೆ ನಾವು ಮಾಡಿದ್ದೇವೆ ಎಂದು ಹೇಳಿದರು.
ನಾನು ಓದುವಾಗ ಊರಲ್ಲಿ ಕರೆಂಟ್ ಇರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ಮೇಲೆ ಬಂದೆವು. 8ನೇ ತರಗತಿಗೆ ಬಂದಾಗ ಊರಿಗೆ ಕರೆಂಟ್ ಬಂತು. ಈಗ ವರ್ಷಕ್ಕೆ 20 ಸಾವಿರ ಕೋಟಿ ರೂ. ಪಂಪ್ ಸೆಟ್ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರ್ಕಾರ ಕೊಡುತ್ತಿದೆ. ಕೆಪಿಸಿಎಲ್ ನೌಕರರ ಶ್ರಮದಿಂದ ವಿದ್ಯುತ್ ರೈತರಿಗೆ ತಲುಪುತ್ತಿದೆ ಎಂದು ತಿಳಿಸಿದರು.
ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಕೆಪಿಸಿಎಲ್ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡದವರು ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ಸಮಾಜದ ಋಣ ಇದೆ. ನಾವಾಗಲೀ, ಅಧಿಕಾರಿಗಳಾಗಲೀ ಸಮಾಜದ ಹಣದಲ್ಲಿ ಬೆಳೆದಿದ್ದೇವೆ. ಆದ್ದರಿಂದ ಸಮಾಜದ ಋಣ ತೀರಿಸುವ ಕಾಳಜಿಯಿಂದ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
Advertisement