
ಬೆಂಗಳೂರು: ಐಟಿ ಸಿಟಿ ಬೆಂಗಳೂರು ಮಹಾನಗರ ಜನತೆ ವೀಕೆಂಡ್ ಪಾರ್ಟಿ ಮೋಜು-ಮಸ್ತಿ ಎಂದರೆ ಬಹಳ ಇಷ್ಟಪಡುತ್ತಾರೆ. ಐಟಿ-ಬಿಟಿಯಲ್ಲಿ, ಫ್ಯಾಶನ್ ಶೋ ಜಗತ್ತಿನಲ್ಲಿ ಕೆಲಸ ಮಾಡುವವರಂತೂ ವೀಕೆಂಡ್ ಬಂದರೆ ಸಾಕು ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಮುಗಿಬೀಳುತ್ತಾರೆ. ಹೀಗಾಗಿ ಪಬ್ ಸಿಟಿ ಎಂದು ಕೂಡ ಕರೆಯಲ್ಪಡುವ ಬೆಂಗಳೂರಿನಲ್ಲಿ ಇತ್ತೀಚೆಗೆ ಅದರಲ್ಲೂ ಕಳೆದ ಆರು ತಿಂಗಳುಗಳಲ್ಲಿ, ಬಾರ್ ಗಳ ಸಂಖ್ಯೆ ಕಡಿಮೆಯಾಗಿದೆಯಂತೆ.
ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇ. 50 ರಷ್ಟು ಹೆಚ್ಚಳ, ಕಾರ್ಪೊರೇಟ್ ವೆಚ್ಚದಲ್ಲಿ ಕಡಿತ ಮತ್ತು ಉದ್ಯೋಗದಲ್ಲಿ ಅಭದ್ರತೆಯಿಂದಾಗಿ ಮದ್ಯದಂಗಡಿಗಳ ಸಂಖ್ಯೆ ಬೆಂಗಳೂರು ನಗರದಲ್ಲಿ ಕಡಿಮೆಯಾಗುತ್ತಿದೆ, ಕೆಲವು ಮದ್ಯದಂಗಡಿಗಳನ್ನು ಮುಚ್ಚಲಾಗುತ್ತಿದೆ ಎಂದು ಆಹಾರ ಮತ್ತು ಪಾನೀಯ (Food & Beverage) ಉದ್ಯಮದ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ (New Indian Express) ಪ್ರತಿನಿಧಿಗೆ ತಿಳಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ, ನಗರದಲ್ಲಿ ಸುಮಾರು 50-60 ಪಬ್‌ಗಳು ಮತ್ತು ಬಾರ್‌ಗಳು ಬಾಗಿಲು ಹಾಕಿವೆ ಇಲ್ಲವೇ ಮಾಲೀಕತ್ವ ಬದಲಾಗಿವೆ ಎಂದು ನ್ಯಾಷನಲ್ ರೆಸ್ಟೋರೆಂಟ್‌ಗಳ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಬೆಂಗಳೂರು ವಿಭಾಗದ ಮುಖ್ಯಸ್ಥ ಮತ್ತು ನಗರದ ಪ್ರಮುಖ ಪಬ್‌ಗಳ ಸರಪಳಿಯಾದ '1522' ನ ಮಾಲೀಕ ಚೇತನ್ ಹೆಗ್ಡೆ ಹೇಳುತ್ತಾರೆ. ಅಬಕಾರಿ ಪರವಾನಗಿ ಶುಲ್ಕ, ಕೆಲಸಗಾರರ ಸಮಸ್ಯೆ ಮತ್ತು ಬಾಡಿಗೆಗಳಲ್ಲಿನ ಹೆಚ್ಚಳ, ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಮದ್ಯದ ಬೆಲೆಗಳಲ್ಲಿನ ಏರಿಕೆಯು ನಗರದಲ್ಲಿ ಮದ್ಯದ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳುತ್ತಾರೆ.
ಬೆಂಗಳೂರಿಗರು ಬುದ್ದಿವಂತರು ಮತ್ತು ಭಾವನಾತ್ಮಕವಾಗಿ ಸ್ಥಿರತೆಯುಳ್ಳವರು. ಮದ್ಯದ ಬೆಲೆ ಏರಿಕೆಯಿಂದ ಹೊರಗೆ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಲು ಇಷ್ಟಪಡುತ್ತಿದ್ದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಹೊರಗೆ ಹೋಗಿ ಊಟ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರೆಸ್ಟೋರೆಂಟ್ ಬಿಲ್ ಹೆಚ್ಚಳ ಜನರು ಯೋಚಿಸಿ ಹಣ ಖರ್ಚುಮಾಡುವಂತೆ ಬೆಂಗಳೂರಿನ ನಿವಾಸಿಗಳಲ್ಲಿ ಬದಲಾವಣೆ ಉಂಟುಮಾಡಿದೆ. ಹಲವರು ಶ್ರೀಮಂತರು ಮನೆಗಳಲ್ಲಿಯೇ ಬಾರ್ ಕೋಣೆಗಳನ್ನು ಮಾಡಿಕೊಂಡಿರುತ್ತಾರೆ.
ಹೊರಗೆ ಊಟ ಮಾಡಿ ದುಬಾರಿ ಬೆಲೆ ನೀಡುವ ಬದಲು, ಹೊರಗಿನಿಂದ ಆಹಾರವನ್ನು ಮನೆಗೆ ತರಿಸಿ ಸ್ನೇಹಿತರೊಂದಿಗೆ ಸೇರಿ ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ನಗರದ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಸಮಸ್ಯೆಗಳ ಕಿರಿಕಿರಿಯಿಲ್ಲದೆ ಮನೆಗಳಲ್ಲಿಯೇ ನಗರ ಜನತೆ ಕಳೆಯಲು ಇಷ್ಟಪಡುತ್ತಾರೆ ಎಂದು ಮತ್ತೊಬ್ಬ ಪಬ್ ಮಾಲೀಕರು ಹೇಳುತ್ತಾರೆ.
ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇ. 50 ರಷ್ಟು ಹೆಚ್ಚಳವಾಗಿರುವುದರಿಂದ, ನಗರದ ಕೆಲವು ಮೈಕ್ರೋ ಬ್ರೂವರಿಗಳು ತಮ್ಮ ಪರವಾನಗಿಗಳನ್ನು ನವೀಕರಿಸಲು ಸಾಧ್ಯವಾಗದಿರಬಹುದು ಎಂದು ಜನಪ್ರಿಯ ಮೈಕ್ರೋ ಬ್ರೂವರಿ ಅಂಗಡಿಯ ಮಾಲೀಕರೊಬ್ಬರು ಹೇಳುತ್ತಾರೆ.
ಇತ್ತೀಚೆಗೆ ಮದ್ಯ ವ್ಯಾಪಾರ ಮಾಡುವುದು ಕಷ್ಟಕರವಾಗುತ್ತಿದೆ. ಮೊದಲು ಸುಮಾರು 9 ಲಕ್ಷ ರೂಪಾಯಿ ಇದ್ದ ವಾರ್ಷಿಕ ಸಿಎಲ್-9 ಪರವಾನಗಿ (ಪಬ್‌ಗಳು ಮತ್ತು ಬಾರ್‌ಗಳು) ಈಗ 14 ಲಕ್ಷ ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಬಾಡಿಗೆಗಳು ಮಿತಿಮೀರಿ ಹೋಗಿವೆ, ಕೂಲಿ ಸಂಬಳವೂ ಹೆಚ್ಚಾಗಿದೆ. ವ್ಯವಹಾರವನ್ನು ಉಳಿಸಿಕೊಳ್ಳುವುದು ಸುಲಭವಲ್ಲ, ಗ್ರಾಹಕರ ಮೇಲೆ ಆರ್ಥಿಕ ಹೊರೆ ಹಾಕಿದರೆ ಅವರು ತೊಂದರೆ ಅನುಭವಿಸುತ್ತಿದ್ದಾರೆ.
ಈಗ ಹೆಚ್ಚುವರಿ ಮಳೆ ಕೂಡ ಜನರು ಹೊರಗೆ ಓಡಾಡುವುದಕ್ಕೆ ತೊಂದರೆ ಉಂಟುಮಾಡುತ್ತಿದೆ. ಪಬ್‌ಗಳು ಮತ್ತು ಬಾರ್‌ಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗುವುದನ್ನು ನಾವು ನೋಡುತ್ತಿದ್ದೇವೆ ಎಂದು ಪಬ್ ಮಾಲೀಕರು ಹೇಳುತ್ತಾರೆ.
Advertisement