
ಬೆಂಗಳೂರು: ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಗಡೀಪಾರು ಮಾಡುವುದನ್ನು ಹೈಕೋರ್ಟ್ ತಡೆದಿದೆ.
ಜುಲೈ 24, 2025 ರಂದು ನಡೆಯಬೇಕಿದ್ದ ಗಡೀಪಾರು ಪ್ರಕ್ರಿಯೆಯನ್ನು ತಡೆಹಿಡಿದಿರುವ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, "ತಕ್ಷಣದ ಗಡೀಪಾರು ಆದೇಶವು ನೀನಾ ಅವರ ಇಬ್ಬರು ಮಕ್ಕಳಾದ ಪ್ರೇಮ (6) ಮತ್ತು ಅಮಾ (4) ಅವರ ಜೀವನಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್‌ನ ಈ ನಿರ್ಧಾರವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ (UNCRC) ತತ್ವಗಳನ್ನು ಆಧರಿಸಿದೆ. ನೀನಾ ಅವರ ಪರ ವಕೀಲರಾದ ಬೀನಾ ಪಿಳ್ಳೈ ಅವರು, ಗಡೀಪಾರು ಪ್ರಕ್ರಿಯೆಯು ಮಕ್ಕಳ ಕಲ್ಯಾಣವನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. UNCRC ಯ 3ನೇ ವಿಧಿಯ ಪ್ರಕಾರ, ಮಕ್ಕಳ ಹಿತಾಸಕ್ತಿಗಳು ಎಲ್ಲಾ ನಿರ್ಧಾರಗಳಲ್ಲಿ ಪ್ರಮುಖ ಆದ್ಯತೆಯಾಗಿರಬೇಕು ಎಂದು ಬಲವಾಗಿ ವಾದಿಸಿದರು.
ಭಾರತ ಸರಕಾರದ ಪರವಾಗಿ ಹಾಜರಾದ ಸಹಾಯಕ ಸಾಲಿಸಿಟರ್ ಜನರಲ್, ಮಕ್ಕಳು ಮಾನ್ಯ ಗುರುತಿನ ದಾಖಲೆಗಳು ಅಥವಾ ಪಾಸ್‌ಪೋರ್ಟ್ ಹೊಂದಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಮಕ್ಕಳಾದ ಪ್ರೇಯ ಮತ್ತು ಅಮಾ ಅವರಿಗೆ ಯಾವುದೇ ಗುರುತಿನ ದಾಖಲೆಗಳಿಲ್ಲದಿರುವುದರಿಂದ, ತಕ್ಷಣದ ಗಡೀಪಾರು ಸಮಂಜಸವಲ್ಲ ಎಂದು ತೀರ್ಪು ನೀಡಿತು. ಅಲ್ಲದೆ, ಕೇಂದ್ರ ಸರ್ಕಾರ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಎರಡು ವಾರಗಳಲ್ಲಿ ಲಿಖಿತವಾಗಿ ತಮ್ಮ ನಿಲುವನ್ನು ತಿಳಿಸುವಂತೆ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 18, 2025 ಕ್ಕೆ ನಿಗದಿಪಡಿಸಿತು.
ನೀನಾ ಕುಟ್ನಿಯಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಜುಲೈ 9, 2025 ರಂದು, ಭೂಕುಸಿತದ ನಂತರ ತಪಾಸಣೆ ನಡೆಸುತ್ತಿದ್ದ ಗೋಕರ್ಣ ಪೊಲೀಸರ ತಂಡವು, ಗುಹೆಯ ಬಳಿ ಬಟ್ಟೆಗಳನ್ನು ಒಣಗಿ ಹಾಕಿದ್ದನ್ನು ಗಮನಿಸಿ ಒಳಗೆ ಪರಿಶೀಲಿಸಿದಾಗ, ನೀನಾ ಮತ್ತು ಅವರ ಮಕ್ಕಳು ಪತ್ತೆಯಾಗಿದ್ದರು.
ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಆಯಾಮವೆಂದರೆ, ನೀನಾ ಅವರ ಸಂಗಾತಿಯಾದ ಇಸ್ರೇಲಿ ಉದ್ಯಮಿ ಡ್ರೋರ್ ಗೋಲ್ಡ್‌ಸ್ಟೈನ್. ಇವರು ಇಬ್ಬರು ಮಕ್ಕಳ ಸಂರಕ್ಷಣೆಯ ಹಕ್ಕಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ನೀನಾ ನನ್ನ ಮಕ್ಕಳನ್ನು ನನ್ನಿಂದ ದೂರವಿಟ್ಟಿದ್ದಾಳೆ. 2017 ರಿಂದ ನಾನು ಅವಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದೇನೆ. ಒಂದು ವೇಳೆ ಅವರನ್ನು ರಷ್ಯಾಕ್ಕೆ ಗಡೀಪಾರು ಮಾಡಿದರೆ, ನಾನು ನನ್ನ ಮಕ್ಕಳಿಂದ ಶಾಶ್ವತವಾಗಿ ದೂರವಾಗುವೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ, ನೀನಾ ಮತ್ತು ಅವರ ಮಕ್ಕಳನ್ನು ತುಮಕೂರಿನ ಮಹಿಳಾ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ರಷ್ಯಾ ರಾಯಭಾರ ಕಚೇರಿಯ ಸಹಾಯದಿಂದ ಗಡೀಪಾರು ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಆದರೆ, ಹೈಕೋರ್ಟ್ ಆದೇಶದಿಂದಾಗಿ ಈ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ಬಿದ್ದಿದೆ.
Advertisement