
ಹಾವೇರಿ: ಜಿಲ್ಲೆಯ ಹಂಸಬಾವಿಯ ಶಿವಯೋಗೋಶ್ವರ ಪ್ರೌಢಶಾಲೆ ಆವರಣದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದು ಮೊಹಮ್ಮದ್ ಶಾ ಕಲಂದರ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
4ನೇ ತರಗತಿಯಲ್ಲಿ ಓದುತ್ತಿದ್ದ ಮೊಹಮ್ಮದ್ ಶಾ ನಿನ್ನೆ ಮಧ್ಯಾಹ್ನ ಊಟದ ವಿರಾಮ ಸಮಯದಲ್ಲಿ ಹೊರಗೆ ಹೋಗಿದ್ದ ವೇಳೆ ವಿದ್ಯುತ್ ತಂತಿ ಕಡಿದುಬಿದ್ದು ಮೊಹಮ್ಮದ್ ಮೈಮೇಲೆ ಬಿದ್ದಿತ್ತು.
ಶಾಲೆ ಆವರಣದಲ್ಲಿದ್ದ ತೆಂಗಿನ ಮರಕ್ಕೆ ತಾಗಿಕೊಂಡು ವಿದ್ಯುತ್ ತಂತಿ ಹಾದುಹೋಗಿದೆ. ವಿದ್ಯಾರ್ಥಿಗಳಾದ ಮೊಹಮ್ಮದ್ ಶಾ ಮತ್ತು ಆತನ ಇನ್ನಿಬ್ಬರು ಸ್ನೇಹಿತರು ಮಧ್ಯಾಹ್ನ ಊಟದ ಸಮಯದಲ್ಲಿ ಆವರಣದಲ್ಲಿದ್ದಾಗ ವಿದ್ಯುತ್ ತಂತಿ ಸಮೇತ ತೆಂಗಿನ ಮರ ಬಿದ್ದಿತು.
ವಿದ್ಯುತ್ ತಂತಿ ಮೊಹಮ್ಮದ್ ಶಾ ಮೈಮೇಲೆ ಬಿದ್ದಿತು. ಇದೇ ವೇಳೆ ಪಕ್ಕದಲ್ಲಿದ್ದ ವಿದ್ಯಾರ್ಥಿಗಳಿಗೂ ವಿದ್ಯುತ್ ತಂತಿ ತಗುಲಿ ತೀವ್ರ ಗಾಯಗೊಂಡಿದ್ದಾರೆ.
ತಕ್ಷಣವೇ ಶಾಲೆಯಲ್ಲಿ ಶಿಕ್ಷಕರಿಗೆ ವಿಷಯ ತಿಳಿದು ಹಾವೇರಿ ಜಿಲ್ಲಾಸ್ಪತ್ರೆಗೆ ಮೂವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದಾಗ ಮೊಹಮ್ಮದ್ ಶಾ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮತ್ತಿಬ್ಬರು ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಾಲಕನ ಸಾವಿಗೆ ಪೋಷಕರು ದೂರು ನೀಡಿಲ್ಲ, ಪೊಲೀಸರು ಆಕಸ್ಮಿಕ ಅವಘಡದ ಸಾವು ಎಂದು ಕೇಸು ದಾಖಲಿಸಿಕೊಂಡಿದ್ದಾರೆ.
Advertisement