
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಚಾಲಕರು ಹಾಗೂ ಹಿಂದಿ ಭಾಷಿಕರ ನಡುವೆ ಆಗಾಗ್ಗೆ ವಾಗ್ವಾದ, ಜಗಳ ನಡೆಯೋದು ಸಾಮಾನ್ಯ.ಈ ನಡುವೆ ನಗರದಲ್ಲಿ ಇಂತಹ ಗಲಾಟೆಗಳ ಕುರಿತು ನವದೆಹಲಿಯ ಡಿಜಿಟಲ್ ಕ್ರಿಯೇಟರ್ ಖ್ಯಾತಿ ಶ್ರೀ ಅವರೊಂದಿಗೆ ನಗರದ ಆಟೋ ರಿಕ್ಷಾ ಚಾಲಕರೊಬ್ಬರು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ನಗರದ ವಾಸ್ತವ ಆಧಾರಿತ ಪ್ರಾಮಾಣಿಕ ಹೇಳಿಕೆ ನೆಟ್ಟಿಗರ ಗಮನ ಸೆಳೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಖ್ಯಾತಿ ಶ್ರೀ ಅವರು ತಮ್ಮ Instagram ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಟೋ ರಿಕ್ಷಾ ಚಾಲಕನೊಂದಿಗೆ ಬೆಂಗಳೂರಿನಲ್ಲಿ ಹಿಂದಿ- ಕನ್ನಡ ಭಾಷಾ ವಿವಾದ ಕುರಿತು ಮಾತನಾಡಿಸಿದ್ದಾರೆ. ಇದಕ್ಕೆ ತಾಳ್ಮೆಯಿಂದಲೇ ಉತ್ತರಿಸುವ ಆಟೋ ಚಾಲಕ, ಹೆಚ್ಚಿನ ಭಾಷೆ-ಸಂಬಂಧಿತ ಘರ್ಷಣೆಗಳು ವೈಯಕ್ತಿಕ ಹತಾಶೆಯಿಂದ ಆಗುತ್ತಿವೆ. ಆದರೆ ಅದರಲ್ಲಿ ಹಗೆತನ ಇರಲ್ಲ. ನಗರದಲ್ಲಿ ಜೀವನವು ಶಾಂತಿಯುತವಾಗಿದೆ. ಇಲ್ಲಿನ ಜನರು ಸಾಮಾನ್ಯವಾಗಿ ಎಲ್ಲರೂಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಹೇಳುತ್ತಾರೆ.
ಖ್ಯಾತಿ ಶ್ರೀ ಕೂಡಾ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ನಾಲ್ಕು ತಿಂಗಳ ಕಾಲ ಕರ್ನಾಟಕದಲ್ಲಿ ಉಳಿದುಕೊಂಡಿದ್ದು, ಬೆಂಗಳೂರಿನಿಂದ ಆಚೆಗೆ ಪ್ರಯಾಣಿಸಿದ್ದೇನೆ. ಭಾಷೆಯ ಬಗ್ಗೆ ನಾನು ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ. ಅಸಂಖ್ಯಾತ ಆಟೋ ಮತ್ತು ಕ್ಯಾಬ್ ಚಾಲಕರು, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಅನೇಕ ಸ್ಥಳಗಳಲ್ಲಿ ಊಟ ಮಾಡಿದ್ದೇನೆ. ನಾನು ಹಿಂದಿ ಮಾತನಾಡಿದ್ದರೂ ಯಾರೂ ಕೂಡಾ ಏನು ತೊಂದರೆ ಕೊಟ್ಟಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಕರಾವಳಿ ಕರ್ನಾಟಕ ಭಾಗಕ್ಕೆ ಭೇಟಿ ನೀಡುವ ಮೊದಲು ಹೇಗೆ ಚಾಲಕನ್ನು ಎದುರಿಸೋದು ಎಂಬುದರ ಹೆದರಿಕೆ ಇತ್ತು. ಆದರೆ, ಇಂಗ್ಲೀಷ್ ಗೊತ್ತಿದ್ದರಿಂದ ನೆರವಾಯಿತು. ಅದಕ್ಕಿಂತಲೂ ಹೆಚ್ಚಾಗಿ ನೀವು ಹೇಗೆ ವರ್ತಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಎರಡನೇ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ.ಈಗಲೂ ತುಂಬಾ ಸುಂದರವಾಗಿದೆ ಎಂದು ಬರೆದುಕೊಂಡಿದ್ದಾರೆ.ಈ ವಿಡಿಯೋಗೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
25 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿರುವ ಬಳಕೆದಾರರೊಬ್ಬರು, ಇಲ್ಲಿನ ಜನರು ಕೆಟ್ಟವರಲ್ಲ. ಅವರನ್ನು ಕೆರಳಿಸಿದಾಗ ಮಾತ್ರ ಪ್ರತಿಕ್ರಿಯಿಸುತ್ತಾರೆ, ನಾನು ಯಾವುದೇ ಭಾಷೆಯ ಸಮಸ್ಯೆಯನ್ನು ಎದುರಿಸಲಿಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಬೆಂಗಳೂರನ್ನು ಪ್ರತಿಯೊಬ್ಬರನ್ನು ಹೇಗೆ ಸ್ವಾಗತಿಸುತ್ತದೆ ಎಂಬುದನ್ನು ಪ್ರಶಂಸಿಸಿದ್ದಾರೆ. ಕೆಲವರು ಕನ್ನಡ ಪದಗುಚ್ಛಗಳನ್ನು ಕಲಿಯಿರಿ. ಇದು ಸ್ಥಳೀಯರನ್ನು ಸಂತೋಷಪಡಿಸುತ್ತದೆ ಎಂದು ಸಲಹೆ ನೀಡಿದ್ದಾರೆ.
Advertisement