
ಬೆಂಗಳೂರು: ಗುರುಗ್ರಾಮ್‌ನಲ್ಲಿ ಬಂಗಾಳಿ ವಲಸೆ ಕಾರ್ಮಿಕರನ್ನು ಬಂಧಿಸಲಾಗುತ್ತಿದೆ ಅಥವಾ ಭಯದಿಂದ ಪಲಾಯನ ಮಾಡುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಬಂಗಾಳಿ ವಲಸೆ ಕಾರ್ಮಿಕರು ಹೆಚ್ಚಾಗಿರುವ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲೂ ವಾತಾವರಣ ದಿನದಿಂದ ದಿನಕ್ಕೆ ಉದ್ವಿಗ್ನವಾಗುತ್ತಿದೆ.
ರಾಷ್ಟ್ರ ರಾಜಧಾನಿಯ ಬಳಿ ನಡೆಯುತ್ತಿರುವ ಘಟನೆಗಳು ಅಂತರ್ಜಾಲದ ಮೂಲಕ ಬಹಿರಂಗವಾಗುತ್ತಿದ್ದಂತೆ, ಬೆಂಗಳೂರಿನ ಬಂಗಾಳಿ ವಲಸಿಗರು ಸಹ ತೀವ್ರ ಆತಂಕಗೊಂಡಿದ್ದು, ತಮ್ಮ ಜೀವನೋಪಾಯ ಮುಂದುವರಿಸುವ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರು ಪೊಲೀಸರು ತಮಗೆ ಕಿರುಕಳ ನೀಡುತ್ತಿದ್ದು, ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
"ಮೊಣಕಾಲು ಮಟ್ಟದ ನೀರಿನಲ್ಲಿ ನಿಂತು ಮೊಸಳೆ ಜೊತೆ ಹೋರಾಡುವಂತಿದೆ" ನಮ್ಮ ಬದುಕು ಎಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ ರೆಹಮಾನ್(ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ.
ರೆಹಮಾನ್ ಒಂದು ದಶಕದ ಹಿಂದೆ ನಗರಕ್ಕೆ ಬಂದಿದ್ದು, ಸಣ್ಣ ಮೊಬೈಲ್ ರಿಪೇರಿ ಮತ್ತು ಫೋಟೋಕಾಪಿ ಅಂಗಡಿ ನಡೆಸುತ್ತಿದ್ದಾರೆ. ನೆರೆಹೊರೆಯ ಪ್ರತಿಯೊಂದು ಸಣ್ಣ ಅಂಗಡಿಯಿಂದ ಪೋಲಿಸರು ಹಣ ಸಂಗ್ರಹಿಸುತ್ತಾರೆ. ಈ ಮಾಸಿಕ ಲಂಚವನ್ನು ನೀಡಲು ನಿರಾಕರಿಸಿದಾಗ ವರ್ತೂರು ಪೊಲೀಸ್ ಠಾಣೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಲಂಚದ ಮೊತ್ತವು 300 ರೂ.ಗಳಿಂದ 3,000-4,000 ರೂ.ಗಳವರೆಗೆ ಇರುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಅಧಿಕಾರಿಗಳು ಮಧ್ಯರಾತ್ರಿ ತಮ್ಮ ಮನೆಗೆ ನುಗ್ಗಿ, ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ತಮ್ಮ ಕಿರಿಯ ಸಹೋದರ(21 ವರ್ಷ ವಯಸ್ಸಿನವರು)ನನ್ನು ಕರೆದೊಯ್ದಿದ್ದಾರೆ ಮತ್ತು 75,000 ರೂ. ನೀಡದಿದ್ದರೆ ಅವರನ್ನು ಇತರ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರೆಹಮಾನ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ಜೀವನೋಪಾಯ ನಡೆಸಲು ಹೆದರುತ್ತಿರುವ ರೆಹಮಾನ್, ತನ್ನ ಸಹೋದರನನ್ನು ಬಿಡುಗಡೆ ಮಾಡಿಸಲು ಕಷ್ಟಪಟ್ಟು ಸಂಪಾದಿಸಿದ ಹಣ ಖರ್ಚು ಮಾಡಬೇಕಾಯಿತು ಎಂದಿದ್ದಾರೆ. ಅಲ್ಲದೆ ಈ ಸಂಬಂಧ ಅವರು ಮಂಗಳವಾರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ರೆಹಮಾನ್ ಪ್ರಕರಣದಂತೆ ಹಲವು ಪ್ರಕರಣಳಿವೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಲ್ಸುಂಡಾ ಎಂಬ ಹಳ್ಳಿಯ ನಿವಾಸಿ ಮಾಬುಲ್ ಶೇಖ್, ಜನವರಿ 2025 ರಲ್ಲಿ ಸಿಸಿಬಿಗೆ ದೂರು ನೀಡಿದ್ದಾರೆ. ಒಂದು ದಿನ, ಸಿಸಿಬಿ ಅವರ ಫೋನ್ ಮತ್ತು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸಿಸಿಬಿ ಕಚೇರಿಗೆ ಭೇಟಿ ನೀಡಿದಾಗ, ಅವರ ಭಾಷೆಯ ಕಾರಣದಿಂದಾಗಿ ಅವರನ್ನು ಬಾಂಗ್ಲಾದೇಶಿ ಎಂದು ಆರೋಪಿಸಲಾಯಿತು ಎಂದು ದೂರಿದ್ದಾರೆ.
Advertisement