
ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಕಂಪನಿ ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ವ್ಯಾಲೆಟ್ ಹ್ಯಾಕ್ ಮಾಡಿ ಸುಮಾರು 384 ಕೋಟಿ ರೂ. ದೋಚಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಜುಲೈ 19 ರಂದು ಅಪರಿಚಿತ ವ್ಯಕ್ತಿಯೊಬ್ಬ ಕಂಪನಿಯ ಕ್ರಿಪ್ಟೋ ವ್ಯಾಲೆಟ್ ಹ್ಯಾಕ್ ಮಾಡಿ 44 ಮಿಲಿಯನ್ ಯುಎಸ್ ಡಾಲರ್(ಸುಮಾರು 384 ಕೋಟಿ ರೂ.) ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಅಪರಿಚಿತ ವ್ಯಾಲೆಟ್‌ಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ ನೆಬ್ಲಿಯೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ(ಸಾರ್ವಜನಿಕ ನೀತಿ ಮತ್ತು ಸರ್ಕಾರಿ ವ್ಯವಹಾರಗಳು) ಹರ್ದೀಪ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಹರ್ದೀಪ್ ಸಿಂಗ್ ಅವರು ನೀಡಿದ ದೂರಿನ ಆಧಾರದ ಮೇಲೆ, ಜುಲೈ 22 ರಂದು ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಳ್ಳತನ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು, ಕಂಪನಿಯ ಉದ್ಯೋಗಿ ರಾಹುಲ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ, ಕಂಪನಿಯ ಆಂತರಿಕ ತನಿಖೆಯಲ್ಲಿ ಅಗರ್ವಾಲ್ ಅವರ ಲ್ಯಾಪ್‌ಟಾಪ್ ಹ್ಯಾಕ್ ಆಗಿದೆ ಎಂದು ಸಿಂಗ್ ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ, ರಾಹುಲ್ ಅಗರ್ವಾಲ್ ಕಳೆದ ವರ್ಷ ಕಂಪನಿ ಲ್ಯಾಪ್‌ಟಾಪ್ ಅನ್ನು ಮತ್ತೊಂದು ಪಾರ್ಟ್ಟೈಂ ಉದ್ಯೋಗಕ್ಕೆ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಅದರಿಂದ ಅವರು ಸುಮಾರು 15 ಲಕ್ಷ ರೂ. ಗಳಿಸಿದ್ದರು.
ಕಂಪನಿ ನೀಡಿದ ಲ್ಯಾಪ್‌ಟಾಪ್ ಅನ್ನು ಪಾರ್ಟ್ಟೈಂ ಉದ್ಯೋಗಕ್ಕೆ ಬಳಸುವುದು ಕಂಪನಿಯ ನೀತಿಯ ಉಲ್ಲಂಘನೆಯಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
"ರಾಹುಲ್ ಅಗರ್ವಾಲ್, ಅಪರಿಚಿತ ಆರೋಪಿಯೊಂದಿಗೆ ಶಾಮೀಲಾಗಿ ಹ್ಯಾಕಿಂಗ್ ಮಾಡಿರಬಹುದು ಎಂದು ಶಂಕಿಸಲಾಗಿದೆ" ಎಂದು ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ.
"ನಾವು ಶಂಕಿತನನ್ನು ಬಂಧಿಸಿದ್ದೇವೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಹ್ಯಾಕ್‌ನಿಂದಾಗಿ ಕಂಪನಿಯು ಸುಮಾರು 384 ಕೋಟಿ ರೂ. ಕಳೆದುಕೊಂಡಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
Advertisement