ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ: ಸಕಾರಣವಿಲ್ಲದೆ ವಾಹನ ತಡೆಯುವಂತಿಲ್ಲ; ಸಿಬ್ಬಂದಿಗೆ ಡಿಜಿಪಿ ಎಂ.ಎ ಸಲೀಂ ಖಡಕ್ ಸೂಚನೆ

ಮೇ 26 ರಂದು ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರು ಮಾಡಿದ ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಸಾವನ್ನಪ್ಪಿತ್ತು.
ಸಂಚಾರಿ ಪೊಲೀಸರು
ಸಂಚಾರಿ ಪೊಲೀಸರು
Updated on

ಬೆಂಗಳೂರು: ಮಂಡ್ಯ ಪೊಲೀಸರ ಅಮಾನವೀಯ ವರ್ತನೆಯಿಂದ 3 ವರ್ಷದ ಮಗು ಸಾವಿನ್ನಪ್ಪಿದ ದುರ್ಘಟನೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಾಹನ ತಪಾಸಣೆಗೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು, ಹೊಸ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಠಾಣಾ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.

ಮಂಡ್ಯದಲ್ಲಿ ಮಗು ಸಾವು ಹಾಗೂ ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣವನ್ನು ಉಲ್ಲೇಖಿಸಿ ಆದೇಶ ಹೊರಡಿಸಿರುವ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವ ವೇಳೆ ರಸ್ತೆ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿರಿಸಿಕೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರ ಹಾಗೂ ಪೊಲೀಸರ ಜೀವಕ್ಕೆ ಕುತ್ತು ಉಂಟಾಗುತ್ತಿದೆ. ಹಾಗಾಗಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಹೇಳಿದ್ದಾರೆ.

ಹೊಸ ನಿಯಮಗಳು ಇಂತಿವೆ...

  • ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪರೀಕ್ಷಿಸಲು ಸಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬಾರದು.

  • ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸಬೇಕು. ಪ್ರಕರಣಗಳನ್ನು ದಾಖಲಿಸುವಾಗ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.

ಸಂಚಾರಿ ಪೊಲೀಸರು
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು, ಮಗು ಸೇರಿ ಐವರು ಜಲಸಮಾಧಿ
  • ದ್ವಿಚಕ್ರ ವಾಹನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿಕೈ ತೆಗೆದುಕೊಳ್ಳುವುದನ್ನು ಮಾಡಬಾರದು.

  • ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಹಿಡಿಯಲು ಅವರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡು ಜಿಲ್ಲಾ ಪೊಲೀಸ್ ಠಾಣಾ ಸರಹದ್ದುಗಳ ವಿವಿಧ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸಿ, ಸದರಿ ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕು.

  • ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಭೌತಿಕವಾಗಿ ಪ್ರಕರಣ ದಾಖಲಿಸುವಾಗ ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ತಮ್ಮ ಸುರಕ್ಷತೆಗಾಗಿ Reflective Jacket ಗಳನ್ನು ಧರಿಸಬೇಕು. ಸಂಜೆ ವೇಳೆಯಲ್ಲಿ ಕಡ್ಡಾಯವಾಗಿ ಎಲ್​​ಇಡಿ ಬಟನ್​​ಗಳನ್ನು ಉಪಯೋಗಿಸಬೇಕು ಹಾಗೂ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು.

  • ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ (ಟಿಎಂಸಿ) ಅಥವಾ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ (ಐಟಿಎಂಎಸ್) ಹೊಂದಿರುವ ಘಟಕಗಳಲ್ಲಿ ಆದಷ್ಟು ಸಂಪರ್ಕ ರಹಿತ ಪ್ರಕರಣಗಳನ್ನು ದಾಖಲಿಸಬೇಕು.

  • ಅನಾಹುತಗಳನ್ನು ತಪ್ಪಿಸಲು ಎಲ್ಲಾ ಘಟಕಗಳಲ್ಲೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

  • ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ ದಾಖಲಿಸಲು ತಂತ್ರಜ್ಞಾನ ಅನುಸರಿಸಬೇಕು.

  • ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100 ರಿಂದ 150 ಮೀಟರ್ ಮೊದಲೇ ರಿಫೆಕ್ಟಿವ್ ರಬ್ಬರ್ ಕೋನ್‌ಗಳನ್ನು ಹಾಗೂ ಸುರಕ್ಷತಾ ಸಲಕರಣಿಗಳನ್ನು ಅಳವಡಿಕೆ, ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕು.

  • ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಇಂತ ಕಾನೂನು ಸುವ್ಯವಸ್ಥೆ ಪೊಲೀಸರ ನೆರವು ಪಡೆಯಬೇಕು.

ಮೇ 26 ರಂದು ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರು ಮಾಡಿದ ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಸಾವನ್ನಪ್ಪಿತ್ತು.

ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ-ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಮೃತಪಟ್ಟ ಬಾಲಕಿ. ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ್ದರು.

ಈ ವೇಳೆ ಬೈಕ್ ಆಯಾ ತಪ್ಪಿ ಬಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿತ್ತು. ಈ ಘಟನೆ ಬೆನ್ನಲ್ಲೇ ಟ್ರಾಫಿಕ್‌ ಪೊಲೀಸರ ಯಡವಟ್ಟಿನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com