
ಮಂಡ್ಯ: ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ 7 ವರ್ಷದ ಬಾಲಕಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು ಮತ್ತು ರಂಜಿತಾ ದಂಪತಿ ಪುತ್ರಿ ಸಾನ್ವಿ (7 ವರ್ಷ) ಮೃತಪಟ್ಟಿದ್ದು, ಮಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೂಲಗಳ ಪ್ರಕಾರ ಮೇ 29 ರಂದು ಮನೆಯಲ್ಲಿದ್ದ ಟೈಲ್ಸ್ ಒಂದು ಬಾಲಕಿ ಪಾದದ ಮೇಲೆ ಬಿದ್ದಿತ್ತು. ಆಗ, ಬಾಲಕಿಯ ಕಾಲು ಮುರಿತವಾಗಿತ್ತು. ಚಿಕಿತ್ಸೆಗಾಗಿ ಪೋಷಕರು ಬಾಲಕಿಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ (MIMS Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಮೂಳೆ ಸರಿಯಾಗಬೇಕು ಎಂದರೆ ಆಪರೇಷನ್ ಮಾಡಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಸಾನ್ವಿಗೆ 29ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯೂ ಮಾತನಾಡಿದ್ದಳು. ತಾನು ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರಿಗೂ ಧೈರ್ಯ ಹೇಳಿದ್ದಳು. ಆದರೆ, ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವು
ಇನ್ನು ಬಾಲಕಿ ಸಾನ್ವಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಮಿಮ್ಸ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಪೋಷಕರ ಈ ಪ್ರತಿಭಟನೆಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಾಲಕಿಗೆ ಆಪರೇಷನ್ ಆದ ನಂತರ ಸರಿಯಾದ ಚಿಕಿತ್ಸೆ ನೀಡಿಲ್ಲ. ವೈದ್ಯರ ಬದಲಾಗಿ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಮಗು ಮೃತಪಟ್ಟಿದ್ದರೆ ಆ ವಿಚಾರವನ್ನು ಪೋಷಕರಿಗೆ ಮೊದಲು ವಿಚಾರ ತಿಳಿಸಬೇಕಾಗಿತ್ತು. ಆದರೆ, ಅದರ ಬದಲು ಪೊಲೀಸರಿಗೆ ವಿಚಾರ ತಿಳಿಸಿ, ನಂತರ ಪೋಷಕರಿಗೆ ತಿಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪೋಷಕರ ಆರೋಪ ತಳ್ಳಿ ಹಾಕಿದ ಆಸ್ಪತ್ರೆ
ಆಸ್ಪತ್ರೆಯ ವೈದ್ಯರು ಪೋಷಕರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮೊದಲು ಪರೀಕ್ಷೆ ಮಾಡಿದ ನಂತರ ಆಪರೇಷನ್ ಮಾಡಲಾಗಿದೆ. ಆದರೆ, ಅಪರೇಷನ್ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ರಕ್ತ ಪರೀಕ್ಷೆ ಮಾಡಿದಾಗ ಮಗುವಿನ ಪ್ಲೇಟ್ಲೇಟ್ ಕಡಿಮೆಯಾಗಿತ್ತು, ಜೊತೆಗೆ ಸೋಂಕು ಆಗಿ ಬಹು ಅಂಗಾಂಗ ವೈಫಲ್ಯವಾಗಿ ಮಗು ಮೃತಪಟ್ಟಿದೆ. ವೈದ್ಯರು ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಿಲ್ಲ ಎಂದು ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Advertisement